ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ ಗೆದ್ದಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 67 ರನ್ಗಳಿಂದ ಗೆದ್ದು ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ಇಂದು ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನೂ ಗೆದ್ದು ಬೀಗಿದೆ. 4 ವಿಕೆಟ್ಗಳಿಂದ ಭಾರತ ತಂಡ ಜಯ ದಾಖಲಿಸಿ ಇನ್ನೂ ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 39.4 ಓವರ್ಗಳಲ್ಲಿ 215 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ಬೌಲರ್ಗಳು ಎದುರಾಳಿ ತಂಡವನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದರು. ಇದರ ನಡುವೆಯೂ ಲಂಕಾ ಪರ ನುವಾನಿದು ಫೆರ್ನಾಂಡೋ (50), ಕುಸಲ್ ಮೆಂಡಿಸ್ (34), ದುನಿತ್ ವೆಲ್ಲಲಗೆ (32), ವನಿಂದು ಹಸರಂಗ(21) ಮತ್ತು ಅವಿಷ್ಕ ಫೆರ್ನಾಂಡೋ 20 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಭಾರತ ಪರವಾಗಿ ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್ ಮತ್ತು ಉಮ್ರಾನ್ ಮಲಿಕ್ ಎರಡು ವಿಕೆಟ್, ಅಕ್ಷರ್ ಪಟೇಲ್ ಒಂದು ವಿಕೆಟ್ ಕಬಳಿಸಿದ್ದರು. ಈ ಮೂಲಕ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾಗಿದ್ದರು.
ಇತ್ತ, ಲಂಕಾ ನೀಡಿದ್ದ 216 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ 43 ಓವರ್ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡರೂ 4 ವಿಕೆಟ್ಗಳ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅಜೇಯ 64 ರನ್ಗಳನ್ನು ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾರ್ದಿಕ್ ಪಾಂಡ್ಯ (36), ಶ್ರೇಯಸ್ ಅಯ್ಯರ್ (28), ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ತಲಾ 21 ರನ್ಗಳ ಕೊಡುಗೆ ನೀಡಿದರು.
ಆರಂಭಿಕ ಆಘಾತ: ಆದರೆ, ಟೀಂ ಇಂಡಿಯಾದ ಆರಂಭದ ಅಷ್ಟೊಂದು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 41 ರನ್ಗಳು ಆಗುವಷ್ಟರಲ್ಲೇ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿಕೊಂಡರು. ಶುಭಮನ್ ಗಿಲ್ ಜೊತೆ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 21 ಎಸೆತಗಳಲ್ಲಿ ಒಂದು ಸಿಕ್ಸರ್, 2 ಬೌಂಡರಿಗಳೊಂದಿಗೆ 17 ರನ್ ಗಳಿಸಿ ಚಾಮಿಕಾ ಕರುಣಾರತ್ನೆ ಎಸೆತದಲ್ಲಿ ಕ್ಯಾಚ್ ಕೊಟ್ಟರು. ಇದರ ಬೆನ್ನಲ್ಲೇ ಶುಭಮನ್ ಗಿಲ್ ಓಟಾದರು. 12 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ ಬಿರುಸಿನ ಬ್ಯಾಟ್ ಬೀಸಿದರೂ ಗಿಲ್ 21 ರನ್ಗಳನ್ನು ಮಾತ್ರ ಕಲೆ ಹಾಕಿದರು.