ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಅಗ್ರ ಕ್ರಮಾಂಕದ ಬ್ಯಾಟರ್ ಚೇತೇಶ್ವರ ಪೂಜಾರ ತಮ್ಮ 100ನೇ ಟೆಸ್ಟ್‌ಗೂ ಮುನ್ನ ದೊಡ್ಡ ಸಂಕಲ್ಪವೊಂದನ್ನು ಮಾಡಿದ್ದಾರೆ. ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಗೆಲ್ಲಲು ಸಹಾಯ ಮಾಡುವುದು ನನ್ನ ಗುರಿ ಎಂದು ಹೇಳಿದರು.
ನಾಗ್ಪುರ ಟೆಸ್ಟ್ ಅನ್ನು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಗೆದ್ದ ನಂತರ ಭಾರತ ಈಗ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಆಸ್ಟ್ರೇಲಿಯಾ ವಿರುದ್ಧ ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಪಂದ್ಯಾವಳಿ ಜೂನ್ 7 ರಿಂದ 11ರ ನಡುವೆ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪ್ರಸ್ತುತ ಡಬ್ಲ್ಯೂಟಿಸಿ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ.
ಭಾರತಕ್ಕಾಗಿ ಗೆಲ್ಲುವುದು ನನ್ನ ಕನಸು:"ಇನ್ನೂ ಸಾಧಿಸುವುದು ಬಹಳಷ್ಟಿದೆ. ನೂರನೇ ಟೆಸ್ಟ್ ಪಂದ್ಯ ಆಡುವುದಕ್ಕೆ ಉತ್ಸುಕನಾಗಿದ್ದೇನೆ. ಇದೇ ಸಮಯದಲ್ಲಿ ನಾವು ಮಹತ್ವದ ಸರಣಿಯನ್ನೂ ಆಡುತ್ತಿದ್ದೇವೆ. ಈ ಟೆಸ್ಟ್ ಪಂದ್ಯ ಗೆಲ್ಲಬೇಕು. ಗೆಲುವಿನ ಹಾದಿಯತ್ತ ಸಾಗುತ್ತೇವೆ. ಇನ್ನೊಂದು ಟೆಸ್ಟ್ ಪಂದ್ಯ ಗೆದ್ದು ನಾವು ಡಬ್ಲ್ಯೂಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ. ಡಬ್ಲ್ಯೂಟಿಸಿ ಫೈನಲ್ ಅನ್ನು ಭಾರತ ತಂಡಕ್ಕಾಗಿ ಗೆಲ್ಲುವುದು ನನ್ನ ಕನಸು" ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪೂಜಾರ ಹೇಳಿದರು.