ಅಹಮದಾಬಾದ್:ಆಸ್ಟ್ರೇಲಿಯಾ ಮತ್ತು ಭಾರತ ಮಧ್ಯೆ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಟಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು ಪಿಚ್ಗಳು. ಸ್ಪಿನ್‌ಸ್ನೇಹಿ ಮತ್ತು ವೇಗಿಗಳಿಗೆ ನೆರವಾಗುವ ಪಿಚ್ಗಳು ಎಂದೆಲ್ಲಾ ಚರ್ಚೆ ನಡೆದಿದ್ದವು. ಪಿಚ್ ಹೇಗಿದ್ದರೇನು?, ಅದರಲ್ಲಿ ಆಡಿ ಗೆಲ್ಲುವುದೇ ನಮ್ಮ ಗುರಿಯಾಗಿರಬೇಕು. ಎಲ್ಲ ಪಿಚ್ಗಳೂ ಆಟಗಾರರಿಗೆ ಸವಲಾಗಿರುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದ್ರಾವಿಡ್, ಪಿಚ್ಗಳು ಯಾವ ರೀತಿ ಇದ್ದರೇನು?. ಆಟಗಾರರರು ತಮ್ಮ ಆಟದತ್ತ ಗಮನ ಹರಿಸಬೇಕು. ಸ್ಪಿನ್, ವೇಗದ ಸ್ನೇಹಿ ಪಿಚ್ ಎಂದೆಲ್ಲಾ ಮಾತನಾಡುತ್ತಾ ಕುಳಿತರೆ ಸಾಲದು. ವಿಕೆಟ್ ಸಿಗುವ ಯಾವ ರೀತಿಯ ಪಿಚ್ ಆದರೂ ಸರಿ. ಟೆಸ್ಟ್‌ಗೆ ಬಳಸಲಾಗುವ ಪಿಚ್ ಅನ್ನು ಮಾತ್ರ ನೋಡುತ್ತೇನೆ ಎಂದು ಹೇಳಿದರು.
ಪಿಚ್ ಯಾವುದೇ ರೀತಿ ಇದ್ದರೂ ಅದು ಉಭಯ ತಂಡಗಳಿಗೆ ನೆರವು ನೀಡುತ್ತದೆ. ಪ್ರತಿ ಪಿಚ್ ಆಟಗಾರರಿಗೆ ಸವಾಲು ಒಡ್ಡುತ್ತದೆ. ಅದು ಕೆಲವೊಮ್ಮೆ ಬೌಲರ್‌ಗಳಿಗೆ ಮತ್ತು ಬ್ಯಾಟರ್‌ಗಳಿಗೆ ನೆರವು ನೀಡಬಹುದು ಅಥವಾ ಸವಾಲಾಗಬಹುದು. ಅದೇನೆ ಇದ್ದರೂ, ನಾವು ಒಂದು ತಂಡದ ವಿರುದ್ಧ ಕಣಕ್ಕಿಳಿದಿರುತ್ತೇವೆ, ಅದನ್ನು ಮಾತ್ರ ನಾವು ಗಮನದಲ್ಲಿಟ್ಟುಳ್ಳಬೇಕು. ಭಾರತ ಕೂಡ ವಿದೇಶಗಳಿಗೆ ಪ್ರವಾಸ ಕೈಗೊಂಡಾಗ ಕಠಿಣ ಪಿಚ್ಗಳಲ್ಲಿ ಕ್ರಿಕೆಟ್ ಆಡಿದ್ದೇವೆ. ಸೋಲು ಗೆಲುವು ಕಂಡಿದ್ದೇವೆ ಎಂದು ಹೇಳಿದರು.
ಸ್ಪಿನ್ ಪಿಚ್ನಲ್ಲಿ ಚೆಂಡು ತುಸು ಹೆಚ್ಚಾಗಿ ತಿರುಗುತ್ತದೆ. ಕೆಲವೊಮ್ಮೆ ಅದು ವೇಗ ಪಡೆಯುತ್ತದೆ. ನಾವು ಬಯಸಿದಂತೆ ಪಿಚ್ ಇರಲು ಸಾಧ್ಯವಿಲ್ಲ. ಅದು ಎಲ್ಲರಿವೂ ತಿಳಿದಿರುವ ವಿಷಯವೇ. ಇದೆಲ್ಲವೂ ಆಟದ ಭಾಗ ಎಂದು ಅಭಿಪ್ರಾಯಪಟ್ಟರು.
4ನೇ ಟೆಸ್ಟ್ಗಾಗಿ 2 ಪಿಚ್:ನಾಳೆಯಿಂದ ಆರಂಭವಾಗುವ 4 ನೇ ಟೆಸ್ಟ್ ಪಂದ್ಯಕ್ಕಾಗಿ ಅಹಮದಾಬಾದ್ನಲ್ಲಿ 2 ಪಿಚ್ ಸಿದ್ಧಪಡಿಸಲಾಗಿದೆ. ಇದಕ್ಕೆ ಕಾರಣ ಏನೆಂಬುದು ನನಗೆ ತಿಳಿದಿಲ್ಲ. ಆದರೆ, ಕ್ಯುರೇಟರ್ ಎರಡು ಪಿಚ್ಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದಾರೆ ಎಂದು ಹೇಳಿದಾಗ ನನಗೇ ಆಶ್ಚರ್ಯವಾಯಿತು. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಎರಡು ಪಿಚ್ ಸಿದ್ಧಪಡಿಸಿದ ಬಗ್ಗೆ ನಾವು ಕ್ಯುರೇಟರ್ರನ್ನು ಪ್ರಶ್ನಿಸಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ರಾಹುಲ್ ದ್ರಾವಿಡ್ ಉತ್ತರಿಸಿದರು.
ಕೊನೆಯ ಟೆಸ್ಟ್ ಪಂದ್ಯ ಆತಿಥ್ಯ ವಹಿಸಿರುವ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2 ಪಿಚ್ಗಳನ್ನು ರೂಪಿಸಲಾಗಿದೆ. ಅದರಲ್ಲಿ ಒಂದು ಹೆಚ್ಚು ಹುಲ್ಲಿನಿಂದ ಕೂಡಿದ್ದಾಗಿದೆ. ಅದು ವೇಗಿಗಳಿಗೆ ನೆರವು ನೀಡಬಹುದಾಗಿದೆ. ನಂತರ ಬ್ಯಾಟಿಂಗ್ಗೂ ಕೂಡ ಸಹಕಾರಿಯಾಗಲಿದೆ. ಇನ್ನೊಂದು ಬೋಳಾಗಿದ್ದು, ಅದು ಮೊದಲ ದಿನದಿಂದಲೇ ಸ್ಪಿನ್ಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಸ್ಪಿನ್ ಸ್ನೇಹಿ ಪಿಚ್ ಸಿದ್ಧತೆ ಮಾಡಲು ಜಿಸಿಎ ಕ್ಯುರೇಟರ್ಗೆ ಭಾರತ ತಂಡದ ಮನವಿ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದು ಕ್ಯುರೇಟರ್ ತಿಳಿಸಿದ್ದಾರೆ. ಸಿದ್ಧವಾದ ಎರಡು ಪಿಚ್ಗಳಲ್ಲಿ ಯಾವುದರಲ್ಲಿ ಪಂದ್ಯ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆಸ್ಟ್ರೇಲಿಯಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಯ 4ನೇ ಮತ್ತು ಕೊನೆಯ ಪಂದ್ಯ ನಾಳೆ ಇಲ್ಲಿ ನಡೆಯಲಿದೆ. ಭಾರತ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದರೆ, ಆಸೀಸ್ ಪಡೆ ಮೂರನೇ ಟೆಸ್ಟ್ ಅನ್ನು ಜಯಿಸಿದೆ. 2-1 ರಲ್ಲಿ ಸಾಗಿರುವ ಸರಣಿಯಲ್ಲಿ ಕೊನೆಯ ಪಂದ್ಯ ಗೆದ್ದು ಆಸೀಸ್ 2-2 ಸಮಬಲ ಸಾಧಿಸಲು ಮುಂದಾಗಿದ್ದರೆ, ಭಾರತ ಪಂದ್ಯ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ಗೆ ಅರ್ಹತೆ ಪಡೆಯಲು ಹೋರಾಡಲಿದೆ.
ಇದನ್ನೂ ಓದಿ:ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್: ಪಂದ್ಯ ವೀಕ್ಷಿಸಲಿರುವ ಮೋದಿ, ಆಸ್ಟ್ರೇಲಿಯಾ ಪ್ರಧಾನಿ