ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​ನಲ್ಲಿ ಭಾರತ ಮಣಿಸಿದ್ದೇವೆ, ಅದೇ ಭರವಸೆಯಲ್ಲಿ ನಾಳೆ ಮೈದಾನಕ್ಕಿಳಿಯುತ್ತೇವೆ: ಬಾಬರ್​ ಅಜಮ್​ - ETV Bharath Karnataka

ಭಾರತ-ಪಾಕಿಸ್ತಾನ ಪಂದ್ಯದ ಒತ್ತಡಕ್ಕಿಂತ ಟಿಕೆಟ್​ ಒದಗಿಸಲು ಹೆಚ್ಚು ಒತ್ತಡವಿದೆ ಎಂದು ಪಾಕಿಸ್ತಾನ ನಾಯಕ ಬಾಬರ್​ ಅಜಮ್​ ಹೇಳಿದರು.

Babar Azam
ಬಾಬರ್​ ಅಜಮ್

By ETV Bharat Karnataka Team

Published : Oct 13, 2023, 5:28 PM IST

Updated : Oct 13, 2023, 6:25 PM IST

ಅಹಮದಾಬಾದ್​ (ಗುಜರಾತ್​): ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ (ಶನಿವಾರ) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್‌​ ಪಂದ್ಯ ನಡೆಯಲಿದೆ.

ಪಂದ್ಯದ ಮುನ್ನಾದಿನವಾದ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ, "ಇದು ನಮಗೆ ಒತ್ತಡದ ಪಂದ್ಯವಲ್ಲ. ನಾವು ಪರಸ್ಪರ ಸಾಕಷ್ಟು ಬಾರಿ ಆಡಿದ್ದೇವೆ. ನಮಗೆ ಹೈದರಾಬಾದ್‌ನಲ್ಲಿ ಸಾಕಷ್ಟು ಬೆಂಬಲ ಸಿಕ್ಕಿತು. ಅಹಮದಾಬಾದ್‌ನಲ್ಲೂ ನಾವು ಅದೇ ರೀತಿ ಭಾವಿಸುತ್ತೇವೆ. ಎರಡೂ ತಂಡಗಳಿಗೆ ಬ್ಯಾಟಿಂಗ್‌ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿ ಇದೆ. ಭಾರತದ ಪರಿಸ್ಥಿತಿಯಲ್ಲಿ ಬೌಲಿಂಗ್​ ಮೇಲೆ ನಾವು ಹೆಚ್ಚು ಕೆಲಸ ಮಾಡಬೇಕಿದೆ" ಎಂದರು.

ಭಾರತದ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸವನ್ನು ಬಾಬರ್​ ವ್ಯಕ್ತಪಡಿಸಿದರು. "ಹಿಂದೆ ಏನಾಯಿತು ಎಂಬುದು ಮುಖ್ಯವಲ್ಲ. ನಾವು ವರ್ತಮಾನದಲ್ಲಿ ಬದುಕಲು ಬಯಸುತ್ತೇವೆ. ನಾವು ಚೆನ್ನಾಗಿ ಆಡಬಹುದೆಂಬ ವಿಶ್ವಾಸವಿದೆ. ಭಾರತ-ಪಾಕಿಸ್ತಾನ ಪಂದ್ಯ ಹೆಚ್ಚು ತೀವ್ರವಾಗಿರುತ್ತದೆ. ಅತಿ ಹೆಚ್ಚು ಅಭಿಮಾನಿಗಳು ಈ ಪಂದ್ಯ ವೀಕ್ಷಣೆಗೆ ಬರುತ್ತಾರೆ, ಅಷ್ಟು ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡ ಬಯಸುತ್ತೇವೆ" ಎಂದು ಹೇಳಿದರು.

ತಮ್ಮ ಬೌಲಿಂಗ್​ ಯುನಿಟ್​ ಬಗ್ಗೆ ಮಾತನಾಡಿ, "ಮೊದಲ 10 ಓವರ್‌ಗಳಲ್ಲಿ ವಿಕೆಟ್ ವಿಭಿನ್ನವಾಗಿರುತ್ತದೆ. ನಂತರ ಅದು ಬದಲಾವಣೆ ಆಗುತ್ತದೆ. ಆದ್ದರಿಂದ, ನಾವು ಅದಕ್ಕೆ ಅನುಗುಣವಾಗಿ ಯೋಜನೆ ಮಾಡಿಕೊಳ್ಳುತ್ತೇವೆ. ಯುವ ವೇಗಿ ನಸೀಮ್ ಶಾ ಅವರನ್ನು ವಿಶ್ವಕಪ್​ನಲ್ಲಿ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಶಾಹೀನ್ ನಮ್ಮ ಅತ್ಯುತ್ತಮ ಬೌಲರ್. ನಾವು ಆತನ ಮೇಲೆ ನಂಬಿಕೆ ಇಟ್ಟಿದ್ದೇವೆ. ಒಂದು ಅಥವಾ ಎರಡು ಪಂದ್ಯಗಳ ಕೆಟ್ಟ ಪ್ರದರ್ಶನಗಳು ನಮಗೆ ತೊಂದರೆ ಕೊಡುವುದಿಲ್ಲ" ಎಂದು ತಿಳಿಸಿದರು.

ಕಳೆದ 20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ದಾಖಲಿಸಿತ್ತು. ಆ ಜಯವನ್ನು ಉಲ್ಲೇಖಿಸಿದ ಬಾಬರ್, ಅಹಮದಾಬಾದ್‌ನಲ್ಲಿ ಅದನ್ನೇ ಪುನರಾವರ್ತಿಸಲು ಬಯಸುತ್ತೇವೆ ಎಂದಿದ್ದಾರೆ. "2021 ರಲ್ಲಿ ನಾವು ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ಸೋಲಿಸಿದ್ದೇವೆ. ನಾವು ಅದನ್ನು ಇಲ್ಲಿಯೂ ಮಾಡಬಹುದು" ಎಂದರು.

"ಈ ವಿಶ್ವಕಪ್‌ನಲ್ಲಿ ನಾನು ಇಲ್ಲಿಯವರೆಗೆ ಹೆಚ್ಚು ರನ್ ಗಳಿಸಿಲ್ಲ. ಈ ಪರಿಸ್ಥಿತಿ ಬದಲಾಗುತ್ತದೆ ಎಂದು ಭಾವಿಸುತ್ತೇನೆ. ನಮ್ಮ ಫೀಲ್ಡಿಂಗ್ ನಿರ್ವಹಣೆ ಅದ್ಭುತವಾಗಿರಬೇಕು. ಹೀಗಾಗಿ ಈ ವಿಚಾರದ ಕಡೆಯೂ ಗಮನ ಹರಿಸಬೇಕಿದೆ" ಎಂದು ಹೇಳಿದರು.

ಇದನ್ನೂ ಓದಿ:ಬುಮ್ರಾ - ಶಾಹೀನ್ ಮಧ್ಯೆ ಹೆಚ್ಚಿದ ಪೈಪೋಟಿ, ಇಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ?

Last Updated : Oct 13, 2023, 6:25 PM IST

ABOUT THE AUTHOR

...view details