ನವದೆಹಲಿ:ತವರು ನೆಲದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಯಾವುದೇ ತಂಡಗಳು ಸೋಲಿಸುವುದು ಅಸಾಧ್ಯ. ಈಗಿನ ಆಟಗಾರರು ಅಷ್ಟು ಬಲಿಷ್ಠವಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯಯಾತ್ರೆಯ ಗುಣಗಾನ ಮಾಡಿರುವ ರಮೀಜ್ ರಾಜಾ, ಭಾರತ ತಂಡ ತನ್ನ ನೆಲದಲ್ಲಿ ಎಂದಿಗೂ ಬಲಿಷ್ಠ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನ ಇದಕ್ಕೆ ಸಾಕ್ಷಿ. ಅದರಲ್ಲೂ ರವೀಂದ್ರ ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್ ಅವರ ಆಟ ಅಮೋಘವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಬಹುವಾಗಿ ಮೆಚ್ಚಿಕೊಂಡಿರುವ ರಮೀಜ್ ರಾಜಾ, ಟೆಸ್ಟ್ ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತೀಯ ಸ್ಪಿನ್ ಪಡೆ ಅಸಾಧಾರಣ ಪ್ರದರ್ಶನ ತೋರಿತು. ಅದರಲ್ಲೂ ರವೀಂದ್ರ ಜಡೇಜಾ ಆಟ ನಿಜಕ್ಕೂ ನಂಬಲಸಾಧ್ಯ. ಜಡ್ಡು ಸ್ಪಿನ್ ದಾಳಿಯನ್ನು ಯಾವುದೇ ಆಸೀಸ್ ಆಟಗಾರರು ಎದುರಿಸಲು ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಕ್ಷರ್ ಪಟೇಲ್ ಸಾಹಸ ಪ್ರಸ್ತಾಪ:ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಆಟವನ್ನೂ ಹೊಗಳಿರುವ ರಾಜಾ, 2ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ ಕುಸಿತ ಕಂಡಾಗ 74 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಇದು ತಂಡಕ್ಕೆ ನೆರವಾಯಿತು. ಒತ್ತಡದಲ್ಲಿ ಅಕ್ಷರ್ ಪಟೇಲ್ ಅದ್ಭುತವಾಗಿ ಬ್ಯಾಟ್ ಮಾಡಿದರು. ಭಾರತವನ್ನು ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡುವ ಆಸ್ಟ್ರೇಲಿಯಾದ ಎಲ್ಲ ತಂತ್ರವನ್ನು ಪಟೇಲ್ ಹುಸಿ ಮಾಡಿದರು. ಅಶ್ವಿನ್ ಕೂಡ ಉತ್ತಮ ಜೊತೆಯಾಟ ನೀಡಿದ್ದನ್ನೂ ಮೆಚ್ಚಿದ್ದಾರೆ.