ಮುಂಬರುವ ಐಸಿಸಿ ವಿಶ್ವಕಪ್ 2023ಕ್ಕಾಗಿ ಅಡಿದಾಸ್ ಟೀಮ್ ಇಂಡಿಯಾದ ಜೆರ್ಸಿಯನ್ನು ಬುಧವಾರ ಬಹಿರಂಗಪಡಿಸಿದೆ. ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಐತಿಹಾಸಿಕವಾಗಿದೆ. ಏಕೆಂದರೆ ಮೊದಲ ಬಾರಿಗೆ ಸಂಪೂರ್ಣ ವಿಶ್ವಕಪ್ಅನ್ನು ಭಾರತದಲ್ಲೇ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಮೂರು ಬಾರಿ ಅಂದರೆ 1987, 1996 ಮತ್ತು 2011ರಲ್ಲಿ ವಿಶ್ವಕಪ್‌ನ ಆತಿಥ್ಯ ವಹಿಸಿತ್ತು. ಆದರೆ ಇದನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರಥಮ ಬಾರಿಗೆ ಭಾರತದಲ್ಲೇ ವಿಶ್ವಕಪ್ ನಡೆಯುತ್ತಿದೆ.
ಪಂದ್ಯಾವಳಿಯನ್ನು ಅಹಮದಾಬಾದ್, ಕೋಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಹೈದರಾಬಾದ್, ದೆಹಲಿ, ಧರ್ಮಶಾಲಾ ಮತ್ತು ಲಕ್ನೋದಲ್ಲಿ ಆಡಿಸಲಾಗುತ್ತಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಹದಿಮೂರನೇ ಆವೃತ್ತಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಲಿವೆ. ಅಕ್ಟೋಬರ್ 5 ರಿಂದ ನವೆಂಬರ್ 19 ರ ವರೆಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಐಸಿಸಿ ವಿಶ್ವಕಪ್ 2023 ಪ್ರಾರಂಭವಾಗುವುದಕ್ಕೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಟೀಮ್ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕರಾದ ಅಡಿದಾಸ್, ಮೆನ್ ಇನ್ ಬ್ಲೂಗಾಗಿ ಜರ್ಸಿಯನ್ನು ಅನಾವರಣಗೊಳಿಸಿದ್ದಾರೆ. ಇಂದು (ಬುಧವಾರ, ಸೆಪ್ಟೆಂಬರ್ 20) ಅಡಿದಾಸ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜರ್ಸಿಯನ್ನು ಬಿಡುಗಡೆ ಮಾಡಲು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಬಿಸಿಸಿಐ ಇತ್ತೀಚೆಗೆ ಟೀಮ್ ಜರ್ಸಿಯ ಒಪ್ಪಂದವನ್ನು ಅಡೀಡಸ್ ಜೊತೆಗೆ ಮಾಡಿಕೊಂಡಿದೆ. ವಿಶ್ವಕಪ್ಗೂ ಮೊದಲು ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಏಷ್ಯಾಕಪ್ ಆಡಿತ್ತು. ಈಗ ವಿಶ್ವಕಪ್ ಜೆರ್ಸಿ ಅನಾವರಣ ಗೊಂಡಿದೆ. ಹೊಸ ಜರ್ಸಿಗಾಗಿ ತಂಡದ ಆಟಗಾರರು ದೇಶಕ್ಕಾಗಿ ಮೂರನೇ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವುದಾಗಿ ಸ್ಫೂರ್ತಿದಾಯಕ ಹಾಡಿನಲ್ಲಿ ಅಭಿನಯಿಸಿದ್ದಾರೆ.
'3 ಕಾ ಡ್ರೀಮ್' ಅಭಿಯಾನ: ಸ್ಫೂರ್ತಿದಾಯಕ ಕ್ರಮದಲ್ಲಿ ಟೀಮ್ ಇಂಡಿಯಾ ತಮ್ಮ ವಿಶ್ವಕಪ್ ಅಭಿಯಾನವನ್ನು '3 ಕಾ ಡ್ರೀಮ್' ಎಂದು ಹೆಸರಿಸಿದೆ. ಇದು ಮೂರನೇ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಎಂದು ಹೇಳಲಾಗುತ್ತಿದೆ. ಏಷ್ಯಾಕಪ್ ಗೆದ್ದಿರುವ ಭಾರತ ತಂಡದ ಮೇಲೆ ಭರವಸೆಯೂ ಹೆಚ್ಚಾಗಿದೆ. ಈ ಅಭಿಯಾನವು ತಂಡದ ದೃಢಸಂಕಲ್ಪ ಮತ್ತು ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆಯುವ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಜರ್ಸಿಯ ಎದೆಯ ಭಾಗದಲ್ಲಿರುವ ಬಿಸಿಸಿಐನ ಲೋಗೋದ ಮೇಲೆ ಎರಡು ಸ್ಟಾರ್ಗಳನ್ನು ನೀಡಲಾಗಿದೆ. ಇದು 1983 ಮತ್ತು 2011 ವಿಶ್ವಕಪ್ ಗೆಲುವನ್ನು ನೆನಪಿಸುತ್ತದೆ.
ಇದರ ಜೊತೆಗೆ ಐಸಿಸಿ ವಿಶ್ವಕಪ್ 2023ರ ಅಧಿಕೃತ ಗೀತೆ 'ದಿಲ್ ಜಶ್ನ್ ಬೋಲೆ' ಸಹ ಇಂದು ಬಿಡುಗಡೆ ಆಗಿದೆ. ರಣವೀರ್ ಸಿಂಗ್ ಮತ್ತು ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಮ್ ಚಕ್ರವರ್ತಿ ಸಂಗೀತವನ್ನು ಗೀತರಚನೆಕಾರ ಶ್ಲೋಕ್ ಲಾಲ್, ಸಾವೇರಿ ವರ್ಮಾ ಬರೆದಿದ್ದಾರೆ. ಹಾಡಿಗೆ ಪ್ರೀತಮ್ ಚಕ್ರವರ್ತಿ, ನಕಾಶ್ ಅಜೀಜ್, ಶ್ರೀರಾಮ ಚಂದ್ರ, ಅಮಿತ್ ಮಿಶ್ರಾ ಮತ್ತು ಜೊನಿತಾ ಗಾಂಧಿ ಹಿನ್ನೆಲೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ:cricket world cup 2023: ವಿಶ್ವಕಪ್ ಥೀಮ್ ಸಾಂಗ್ 'ದಿಲ್ ಜಶ್ನ್ ಬೋಲೆ' ಕೇಳಿದಿರಾ?