ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮಳೆಯೊಂದಿಗಿನ ಜಂಜಾಟವಾಗುತ್ತಿದ್ದು, 4 ದಿನಗಳಲ್ಲಿ 360 ಓವರ್ಗಳ ಬದಲಾಗಿ ಕೇವಲ 141.1 ಓವರ್ಗಳ ಆಟ ನಡೆದಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಗಳಿಗೂ ಅಸಮಾಧಾನ ತಂದಿದೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮಹತ್ವದ್ದಾಗಿರುವ ಯಾವುದೇ ಪಂದ್ಯಗಳು ಇಂಗ್ಲೆಂಡ್ನಲ್ಲಿ ನಡೆಯಬಾರದು ಎಂದು ಹೇಳುವ ಮೂಲಕ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ WTC ಫೈನಲ್ ಪಂದ್ಯದ 4 ದಿನಗಳು ಮುಗಿದಿವೆ. ಇದರಲ್ಲಿ ಸಂಪೂರ್ಣ 2 ದಿನಗಳ ಆಟ ಮಳೆಗಾಹುತಿಯಾದರೆ, ಮತ್ತೆರಡು ದಿನ ಆಟ ನಡೆದರೂ ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಪೀಟರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದುಬೈ ಸೂಕ್ತ ಸ್ಥಳವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಹೇಳಲು ನನಗೆ ನೋವಾಗುತ್ತಿದೆ, ಆದರೂ ಅತ್ಯಂತ ಪ್ರಮುಖವಾಗಿರುವ ಕ್ರಿಕೆಟ್ ಪಂದ್ಯಗಳು ಇಂಗ್ಲೆಂಡ್ನಲ್ಲಿ ನಡೆಯಬಾರದು ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರಕಾರ ದುಬೈ WTC ಫೈನಲ್ನಂತಹ ಪ್ರಮುಖ ಪಂದ್ಯವನ್ನು ಆಯೋಜಿಸಬೇಕು. ತಟಸ್ಥ ಸ್ಥಳ, ಅಸಾಧಾರಣ ಕ್ರೀಡಾಂಗಣ, ಖಾತರಿಯ ಹವಾಮಾನ, ಅತ್ಯುತ್ತಮ ತರಬೇತಿ ಸೌಲಭ್ಯಗಳು ಮತ್ತು ಪ್ರಯಾಣ ಕೇಂದ್ರ, ಐಸಿಸಿ ಕೇಂದ್ರವೂ ಕೂಡ ಪಕ್ಕದಲ್ಲಿದೆ ಎಂದು ಪೀಟರ್ಸನ್ ಮತ್ತೊಂದು ಟ್ವೀಟ್ನಲ್ಲಿ ಬರೆದು ಕೊಂಡಿದ್ದಾರೆ.