ಮುಂಬೈ:ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿದರೆ, ಅವರ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಇರಲಿದೆ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ ದೊಡ್ಡ ಹೊಡೆತಗಳಿಂದ ಗುರುತಿಸಲ್ಪಟ್ಟಿರುವ ಪಂತ್, ತಡವಾಗಿ ಟೆಸ್ಟ್ ಕ್ರಿಕೆಟ್ಗೆ ಲಗ್ಗೆ ಹಾಕಿದ್ದು, ಇದೀಗ ಆಡಿರುವ 30 ಪಂದ್ಯಗಳಿಂದ 40.85ರ ಸರಾಸರಿಯಲ್ಲಿ ನಾಲ್ಕು ಶತಕ, ಒಂಬತ್ತು ಅರ್ಧಶತಕ ಸೇರಿ 1920 ರನ್ಗಳಿಸಿದ್ದಾರೆ.
ಭಾರತದಲ್ಲಿ ಆಯೋಜನೆಗೊಂಡಿದ್ದ ಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ 24 ವರ್ಷದ ಪಂತ್ ಕ್ರಮವಾಗಿ 120.12 ಸ್ಟ್ರೇಕ್ ರೇಟ್ನಲ್ಲಿ 185 ರನ್ಗಳಿಸಿದ್ದಾರೆ. ಇವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ವಿರೇಂದ್ರ ಸೆಹ್ವಾಗ್, ಒಂದು ವೇಳೆ ಪಂತ್ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿದರೆ, ಅವರ ಹೆಸರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿರಲಿದ್ದು, ಅದನ್ನ ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದಿದ್ದಾರೆ.