ಮಾಲ್ಡೀವ್ಸ್:ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗಿರುವ ಕಾರಣ ಅದೇ ಕಾರಣಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ರದ್ದುಗೊಂಡಿದೆ. ಇದೀಗ ಮುಂಬರುವ ಟಿ-20 ವಿಶ್ವಕಪ್ ಕೂಡ ಭಾರತದಲ್ಲಿ ಆಯೋಜನೆಗೊಂಡಿದ್ದು, ಅದರ ಮೇಲೂ ಕೋವಿಡ್ ಕರಿನೆರಳು ಬೀಳುವ ಸಾಧ್ಯತೆ ಇದೆ.
ಇದೇ ವಿಷಯವಾಗಿ ಆಸ್ಟ್ರೇಲಿಯಾದ ಬೌಲಿಂಗ್ ಆಲ್ರೌಂಡರ್ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದು, ಭಾರತ ಸುರಕ್ಷಿತವಾಗಿಲ್ಲದಿದ್ದರೆ ಅಲ್ಲಿ ಟಿ-20 ವಿಶ್ವಕಪ್ ಆಡಿಸುವುದು ಒಳ್ಳೆಯದಲ್ಲ ಎಂದಿದ್ದಾರೆ. ಜತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸ್ಥಳಾಂತರ ಮಾಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಟಿ-20 ವಿಶ್ವಕಪ್ ನಡೆಯಲು ಆರು ತಿಂಗಳ ಕಾಲ ಬಾಕಿ ಉಳಿದಿದ್ದು, ಈಗಲೇ ಅಲ್ಲಿನ ಸರ್ಕಾರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ಸಲದ ಐಪಿಎಲ್ ದುಬೈನಲ್ಲಿ ಆಯೋಜನೆ ಮಾಡಿದ್ದರೇ ಉತ್ತಮವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.
ಐಪಿಎಲ್ ವೇಳೆ ಬಯೋ ಬಬಲ್ ಹೊರತಾಗಿ ಕೂಡ ಪ್ಲೇಯರ್ಸ್ಗಳಲ್ಲಿ ಕೋವಿಡ್ ಕಾಣಿಸಿಕೊಂಡಿರುವುದು, ಐಸಿಸಿ ಈವೆಂಟ್ ಮೇಲೆ ಕರಿನೆರಳು ಬೀರಿದೆ. ಭಾರತದಲ್ಲಿ ಟಿ - 20 ವಿಶ್ವಕಪ್ ನಡೆಸಬೇಕೇ? ಅಥವಾ ಬೇಡ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ನವೆಂಬರ್ ವೇಳೆಗೆ ಭಾರತದಲ್ಲಿ ಮೂರನೇ ಅಲೆ ಲಗ್ಗೆ ಹಾಕಲಿದೆ ಎಂಬ ಮಾತು ಕೇಳಿ ಬರುತ್ತಿರುವ ಕಾರಣ ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾತುರಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ಯಾಟ್ ಕಮ್ಮಿನ್ಸ್ ಯುನಿಸೆಫ್ ಆಸ್ಟ್ರೇಲಿಯಾ ಮೂಲಕ 37 ಲಕ್ಷ, 36 ಸಾವಿರ ರೂ. ಸಹಾಯಧನ ನೀಡಿದ್ದಾರೆ. ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಲಕ್ಷಾಂತರ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ.