ಓವೆಲ್ (ಲಂಡನ್): ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ತಪ್ಪಿಸಿಕೊಂಡಿತು. 69.4 ಓವರ್‌ಗಳಲ್ಲಿ 296 ರನ್ ಗಳಿಸಿ ತಂಡ ಆಲ್ಔಟಾಗಿದೆ. ಆಸ್ಟ್ರೇಲಿಯಾ 173 ರನ್‌ಗಳ ಮುನ್ನಡೆ ಗಳಿಸಿತು.
ಭೋಜನ ವಿರಾಮದಿಂದ ಮರಳಿದ ಕೂಡಲೇ ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಅವರು 11 ರನ್‌ಗಳಿಂದ ಶತಕ ವಂಚಿತರಾದರು. ಊಟಕ್ಕೆ ತೆರಳುವ ಮುನ್ನ 122 ಬಾಲ್ಗೆ 89 ರನ್ ಗಳಿಸಿದ್ದ ರಹಾನೆ, ನಂತರ 7 ಬಾಲ್ ಎದುರಿಸಿ ವಿಕೆಟ್ ಕೊಟ್ಟರು. ನಾಯಕ ಪ್ಯಾಟ್ ಕಮಿನ್ಸ್ ಔಟ್ ಸ್ವಿಂಗ್ಗೆ ಬೌಂಡರಿ ಗಳಿಸುವ ಭರದಲ್ಲಿ ಮೂರನೇ ಸ್ಟಂಪ್ಗೆ ಕ್ಯಾಚ್ ಕೊಟ್ಟರು. 129 ಬಾಲ್ ಎದುರಿಸಿದ ರಹಾನೆ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸ್ ಸೇರಿತ್ತು.
ನಂತರ ಶಾರ್ದೂಲ್ ಠಾಕೂರ್ ತಮ್ಮ ಇನ್ನಿಂಗ್ಸ್ ಅನ್ನು ಬೌಲರ್ಗಳ ಜೊತೆ ಸೇರಿ ಮುಂದುವರೆಸಿದರು. ಮೊದಲ ಅವಧಿಯ ಮುಕ್ತಾಯಕ್ಕೆ ಠಾಕೂರ್ 36 ರನ್ ಗಳಿಸಿದರು. ನಂತರ ಉಮೇಶ್ ಯಾದವ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದ ಅವರು ಅರ್ಧಶತಕ ದಾಖಲಿಸಿದರು. ಓವೆಲ್ನಲ್ಲಿ ಠಾಕೂರ್ ಗಳಿಸಿದ ಮೂರನೇ ಅರ್ಧಶತಕ ಮತ್ತು ವೈಯುಕ್ತಿಕ ಇದು ನಾಲ್ಕನೇಯದ್ದಾಗಿದೆ. 109 ಬಾಲ್ನಲ್ಲಿ 6 ಬೌಂಡರಿಯ ಸಹಾಯದಿಂದ 51 ರನ್ ಗಳಿಸಿ ಶಾರ್ದೂಲ್ ವಿಕೆಟ್ ಕೊಟ್ಟರು.
ನಂತರ ಬ್ಯಾಟಿಂಗ್ ಬಾಲಂಗೋಚಿಗಳಾದ ಯಾದವ್ 5 ಮತ್ತು ಶಮಿ 13 ರನ್ ಗಳಿಸಿದರು. ಅಂತಿಮವಾಗಿ ಭಾರತ ಆಸಿಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್ ಗಳಿಸಿತು. ಇದೇ ವೇಳೆ 173 ರನ್‌ಗಳ ಹಿನ್ನಡೆ ಅನುಭವಿಸಿತು.
ಭೋಜನ ವಿರಾಮದ ವೇಳೆಗೆ..:ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದ 3ನೇ ದಿನದ ಮೊದಲ ಅವಧಿಯಲ್ಲಿ ಭಾರತ ತಾಳ್ಮೆಯ ಬ್ಯಾಟಿಂಗ್ ಮಾಡಿತು. ರಹಾನೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದು ಸೊಗಸಾದ ಅರ್ಧಶತಕ ಗಳಿಸಿದರು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಅವರು ರಚಿಸಿದರು.
ಮೊದಲ ಸೆಷನ್ನಲ್ಲಿ ಭಾರತ 1 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಿತು. ಭೋಜನ ವಿರಾಮದ ವೇಳೆಗೆ ತಂಡವು 6 ವಿಕೆಟ್ ನಷ್ಟಕ್ಕೆ 260 ರನ್ ಸಂಪಾದಿಸಿತು. ಅಜಿಂಕ್ಯಾ ರಹಾನೆ 122 ಬಾಲ್ನಲ್ಲಿ 89 ರನ್ ಗಳಿಸಿ ಶತಕದಿಂದ 11 ರನ್ ದೂರದಲ್ಲಿದ್ದಾರೆ. ಶಾರ್ದೂಲ್ ಠಾಕೂರ್ 83 ಎಸೆತದಲ್ಲಿ 36 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಎರಡನೇ ದಿನವಾದ ನಿನ್ನೆ ಭಾರತ, ಬೌಲಿಂಗ್ನಲ್ಲಿ ಆಸಿಸ್ನ 7 ವಿಕೆಟ್ ಉರುಳಿಸಿ 469 ರನ್ಗೆ ಆಲ್ಔಟ್ ಮಾಡಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಆರಂಭಿಕರಾದ ಶುಭಮನ್ ಗಿಲ್ (13), ರೋಹಿತ್ ಶರ್ಮಾ (15), ವಿರಾಟ್ ಕೊಹ್ಲಿ (14) ಮತ್ತು ಚೇತೇಶ್ವರ ಪೂಜಾರ (14) ಅವರ ವಿಕೆಟ್ ಪತನದ ನಂತರ 71 ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಜಡೇಜಾ ಮತ್ತು ಅಜಿಂಕ್ಯಾ ರಹಾನೆ ಭಾರತಕ್ಕೆ ಆಸರೆಯಾದರು. ಈ ಜೋಡಿ 50+ ರನ್ ಜೊತೆಯಾಟ ನೀಡಿತು. ಬಿರುಸಿನ ಬ್ಯಾಟಿಂಗ್ ಮಾಡಿದ 'ಜಡ್ಡು' 51 ಬಾಲ್ನಲ್ಲಿ 48 ರನ್ ಗಳಿಸಿ ಔಟಾದರು.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತ್ತು. ಕ್ರೀಸ್‌ನಲ್ಲಿ ವಿಕೆಟ್ ಕೀಪರ್ ಕೆ.ಎಸ್. ಭರತ್ (5) ಮತ್ತು ಅಜಿಂಕ್ಯಾ ರಹಾನೆ (29) ಇದ್ದರು. ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ತಂಡವು ಭರತ್ ವಿಕೆಟ್ ಕಳೆದುಕೊಂಡಿತು. ಮೊದಲ ಬಾಲ್ ಎದುರಿಸಿದ ಭರತ್ ಕ್ಲೀನ್ ಔಟ್ ಆದರು. ನಂತರ ಬಂದ ಬೌಲಿಂಗ್ ಆಲ್ರೌಂಡರ್ 'ಲಾರ್ಡ್' ಖ್ಯಾತಿಯ ಶಾರ್ದೂಲ್ ಠಾಕೂರ್ ರಹಾನೆಗೆ ಸಾಥ್ ನೀಡಿದರು.
ಡಬ್ಲೂಟಿಸಿ ಫೈನಲ್‌ನಲ್ಲಿ ಭಾರತೀಯನ ಮೊದಲ ಅರ್ಧಶತಕ: 18 ತಿಂಗಳ ನಂತರ ಮತ್ತೆ ಟೆಸ್ಟ್ ಜರ್ಸಿ ತೊಟ್ಟಿರುವ ಅಜಿಂಕ್ಯಾ ರಹಾನೆ ತಮ್ಮ ಅನುಭವವನ್ನು ಓವಲ್‌ನಲ್ಲಿ ಸಂಪೂರ್ಣವಾಗಿ ಬಳಸಿಕೊಂಡರು. ಆಸಿಸ್ನ ವೇಗಿಗಳಿಗೆ ಸಮರ್ಥವಾಗಿ ಉತ್ತರ ಕೊಟ್ಟ ಭಾರತದ ಏಕೈಕ ಬ್ಯಾಟರ್ ಆದರು. ರಹಾನೆ ಟೆಸ್ಟ್ ಕ್ರಿಕೆಟ್ನ 26 ನೇ ಅರ್ಧಶತಕ ದಾಖಲಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಪರ ಅರ್ಧಶತಕ ಗಳಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿಗೂ ಭಾಜನರಾದರು.
5000 ರನ್ ಪೂರೈಸಿದ ರಹಾನೆ: 70 ರನ್ ಪೂರೈಸಿದ ಅಜಿಂಕ್ಯಾ ರೆಹಾನೆ ಟೆಸ್ಟ್ ಕ್ರಿಕೆಟ್ನಲ್ಲಿ 5000 ಗಡಿ ತಲುಪಿದರು. ಈ ಐದು ಸಾವಿರ ರನ್ ಪೂರೈಸಿದ ಭಾರತದ 13ನೇ ಆಟಗಾರ ರಹಾನೆಯಾಗಿದ್ದಾರೆ.
ಶತಕದ ಜೊತೆಯಾಟ: ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯಾ ರಹಾನೆ 7ನೇ ವಿಕೆಟ್‌ಗೆ 100 ರನ್ ಜೊತೆಯಾಟವಾಡಿದರು. ಇದು ಇಂಗ್ಲೆಂಡ್‌ನಲ್ಲಿ ಭಾರತದ ಏಳನೇ ಅಥವಾ ಅದಕ್ಕಿಂತ ಕಡಿಮೆ ವಿಕೆಟ್‌ಗೆ ಆರನೇ ಶತಕದ ಜೊತೆಯಾಟವಾಗಿದೆ. ಅವುಗಳಲ್ಲಿ ಎರಡರಲ್ಲಿ ಶಾರ್ದೂಲ್ ಠಾಕೂರ್ ಭಾಗಿಯಾಗಿರುವ ಏಕೈಕ ಬ್ಯಾಟರ್ ಆಗಿದ್ದಾರೆ. ಅವರು 2021 ರಲ್ಲಿ ಓವಲ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಅವರೊಂದಿಗೆ 100 ಜೊತೆಯಾಟ ಮಾಡಿದ್ದರು.
ಇದನ್ನೂ ಓದಿ:Virat Kohli: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವೈಫಲ್ಯ- ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?