ಓವಲ್ (ಲಂಡನ್):ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟ ಅಂತ್ಯಕ್ಕೆ 85 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಬಾರಿಸಿ ಬೃಹತ್ ಮೊತ್ತ ಕಲೆ ಹಾಕುವತ್ತ ಮುನ್ನಡೆದಿದೆ. ನಾಲ್ಕನೇ ವಿಕೆಟ್ಗೆ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಭರ್ಜರಿ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಟ್ರಾವಿಸ್ ಹೆಡ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿ ಶತಕ ಸಿಡಿಸಿದರೆ, ಸ್ಮಿತ್ ತಾಳ್ಮೆಯ ಆಟದ ಮೂಲಕ ಉತ್ತಮ ಸಾಥ್ ನೀಡಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಭಾರತದ ನಾಯಕ ಬೌಲಿಂಗ್ ಆಯ್ದುಕೊಂಡರು. ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಉತ್ತಮ ಹಿಡಿತ ಸಾಧಿಸಿತು. 3.4 ಓವರ್ನಲ್ಲೇ ಮೊಹಮ್ಮದ್ ಸಿರಾಜ್ ಆರಂಭಿಕ ಉಸ್ಮಾನ್ ಖವಾಜಾ ಶೂನ್ಯಕ್ಕೆ ಔಟ್ ಮಾಡಿದರು. 43 ರನ್ ಗಳಿಸಿ ಆಡುತ್ತಿದ್ದ ಮತ್ತೊಬ್ಬ ಆರಂಭಿಕ ಡೇವಿಡ್ ವಾರ್ನರ್ ಅವರನ್ನು ಶಾರ್ದೂಲ್ ಠಾಕೂರ್ ಪೆವಿಲಿಯನ್ ಸೇರಿಸಿದರು. ಇದರಿಂದ 23 ಓವರ್ಗೆ ಆಸೀಸ್ 74 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ನಂತರದ ಸೆಷನ್ಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಕಮ್ಬ್ಯಾಕ್ ಮಾಡಿತು. ಚಹಾ ವಿರಾಮಕ್ಕೆ 97 ರನ್ ಕಲೆ ಹಾಕಿ ಒಂದು ವಿಕೆಟ್ ಮಾತ್ರ ಒಪ್ಪಿಸಿತು. 62 ಎಸೆತಗಳಲ್ಲಿ 26 ರನ್ ಗಳಿಸಿದ್ದ ಲ್ಯಾಬುಸ್ಚಾಗ್ನೆ ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು.
ಹೆಡ್ - ಸ್ಮಿತ್ ಜುಗಲ್ಬಂಧಿ:ಮತ್ತೊಂದೆಡೆ, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಜುಗಲ್ಬಂಧಿ ಆಸೀಸ್ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕಲು ನೆರವಾಯಿತು. ನಾಲ್ಕನೇ ವಿಕೆಟ್ಗೆ ಇಬ್ಬರು ಬ್ಯಾಟರ್ಗಳು 370 ಬಾಲ್ಗಳಲ್ಲಿ 251 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. ನಾಳೆಗೂ ಈ ಬ್ಯಾಟರ್ಗಳು ಕ್ರೀಸ್ ಕಾಯ್ದುಕೊಂಡಿದ್ದು, ಮತ್ತಷ್ಟು ರನ್ ಕಲೆ ಹಾಕುವ ಸಾಧ್ಯತೆ ಇದೆ.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಟ್ರಾವಿಸ್ ಹೆಡ್ ಏಕದಿನದ ಮಾದರಿಯಲ್ಲಿ ಬಿರುಸಿನ ಬ್ಯಾಟ್ ಬೀಸಿದರು. 22 ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಸಮೇತ ಕೇವಲ 156 ಎಸೆತಗಳಲ್ಲಿ 146 ರನ್ ಸಿಡಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಆರನೇ ಶತಕ ಬಾರಿಸಿದ ಹೆಡ್ಗೆ ವಿದೇಶಿ ನೆಲದಲ್ಲಿ ಚೊಚ್ಚಲ ಸೆಂಚುರಿ ಇದಾಗಿದೆ. ಅಲ್ಲದೇ, ಭಾರತದ ವಿರುದ್ಧ ಸಹ ಹೆಡ್ ಅವರಿಗಿದು ಮೊದಲ ಶತಕವಾಗಿದೆ. ಮತ್ತೊಂದೆಡೆ, ಸ್ಟೀವ್ ಸ್ಮಿತ್ ತಾಳ್ಮೆ ಆಟದ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 38ನೇ ಅರ್ಧ ಶತಕ ದಾಖಲಿಸಿದ್ದಾರೆ. ಟ್ರಾವಿಸ್ ಹೆಡ್ ಉತ್ತಮ ಸಾಥ್ ನೀಡಿದ ಸ್ಮಿತ್ ಶತಕದ ಹೊಸ್ತಿಲಿಗೆ ಬಂದು ತಲುಪಿದ್ದಾರೆ. 227 ಬಾಲ್ಗಳ ಎದುರಿಸಿ 95 ರನ್ ಕಲೆ ಹಾಕಿದರು. ಟೀ ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ನಿವೃತ್ತಿ ವಾಪಸ್ ಪಡೆದು ಆ್ಯಶಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಸೇರಿದ ಮೋಯಿನ್ ಅಲಿ