ಬೆಂಗಳೂರು:ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಜೇಯ 201 ರನ್‌ಗಳ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಗೆದ್ದ ನಂತರ ಆಸ್ಟ್ರೇಲಿಯಾ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಆತಿಥೇಯ ಭಾರತವು ಮಾರ್ಕ್ಯೂ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದು, ಎಲ್ಲಾ ಎಂಟು ಲೀಗ್ ಹಂತದ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಕೂಡ ಈಗಾಗಲೇ ಕೊನೆಯ ನಾಲ್ಕರಲ್ಲಿ ತನ್ನು ಸ್ಥಾನ ಭದ್ರಪಡಿಸಿಕೊಂಡಿದೆ.
ಕೇನ್ ವಿಲಿಯಮ್ಸನ್ ನೇತೃತ್ವದ ತಂಡವು ಪ್ರಸಿದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ದುರ್ಬಲವಾಗಿರುವ ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯವು ಕಿವೀಸ್‌ಗೆ ವರ್ಚುವಲ್ ಕ್ವಾರ್ಟರ್‌ಫೈನಲ್‌ನಂತಾಗಿದೆ. ನ್ಯೂಜಿಲೆಂಡ್ ತಂಡದ ಭವಿಷ್ಯವು ಅವರ ಕೈಯಲ್ಲಿದೆ. ಬಹುಶಃ ದೊಡ್ಡ ಅಂತರದಿಂದ ಗೆದ್ದರೆ, ಕಿವೀಸ್‌ಗೆ ಸೆಮಿಫೈನಲ್‌ನಲ್ಲಿ ಸ್ಥಾನ ಪಕ್ಕಾ ಆಗಲಿದೆ.
ನಾಲ್ಕು ಗೆಲುವುಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ನ್ಯೂಜಿಲೆಂಡ್, ನಂತರ ಪಾಕಿಸ್ತಾನದ ವಿರುದ್ಧದ ಸೋಲು ಸೇರಿದಂತೆ ನಾಲ್ಕು ಸತತ ಸೋಲುಗಳನ್ನು ಅನುಭವಿಸಿದ ಕಾರಣದಿಂದ, ನಾಳೆ ನಡೆಯಲಿರುವ ಮ್ಯಾಚ್ ನಿರ್ಣಾಯಕವಾಗಲಿದೆ. ಸೆಮಿಫೈನಲ್ಗಾಗಿ ಮೂರು ತಂಡಗಳು ಪೈಪೋಟಿ ನಡೆಸುತ್ತಿರುವುದರಿಂದ ವಿಶ್ವಕಪ್ನ ಮುಂದಿನ ಪಂದ್ಯಗಳು ಮತ್ತಷ್ಟು ರೋಚಕತೆಯಿಂದ ಕೂಡಿರಲಿವೆ. ನ್ಯೂಜಿಲೆಂಡ್ ತಂಡದ ಆಟಗಾರರು ಗುರುವಾರ ಮೈದಾನಕ್ಕೆ ಇಳಿದಾಗ ಅವರ ಮನಸ್ಸಿನಲ್ಲಿ ಸೆಮಿಫೈನಲ್ ಸ್ಥಾನ ಅನ್ನೋ ಒಂದೇ ಒಂದು ವಿಚಾರ ಇರುತ್ತದೆ.
ನಾಳೆ ಮ್ಯಾಚ್ ಕಿವೀಸ್‌ಗೆ ನಿರ್ಣಾಯಕ:ಕಿವೀಸ್ ಪ್ರಸ್ತುತ ನಾಲ್ಕು ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಾಲ್ಕು ಸೋಲುಗಳೊಂದಿಗೆ 8 ಅಂಕಗಳೊಂದಿಗೆ +0.398 ರನ್ ರೇಟ್ ಹೊಂದಿದೆ. ಆದ್ದರಿಂದ ಅವರ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಅವರನ್ನು 10 ಅಂಕಗಳಿಗೆ ಕೊಂಡೊಯ್ಯುತ್ತದೆ. ಜೊತೆಗೆ ದಾಖಲೆಯ ಅಂತರದ ಗೆಲುವು ಅವರ ರನ್ ರೇಟ್‌ನ್ನು ಹೆಚ್ಚಿಸುತ್ತದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಒಂದೇ ಅಂಕದಲ್ಲಿ ಕೊನೆಗೊಂಡರೂ ಕೂಡ ನಿರ್ಣಾಯಕವಾಗಿರುತ್ತದೆ.
ಪ್ರಸ್ತುತ ವಿಶ್ವಕಪ್‌ನಲ್ಲಿ ಈಗಾಗಲೇ ಮೂರು ಶತಕಗಳನ್ನು ಗಳಿಸಿರುವ ಉತ್ತಮ ಫಾರ್ಮ್‌ನಲ್ಲಿರುವ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ಗೆ ನೆರವಾಗಲಿದ್ದಾರೆ. ಶ್ರೀಲಂಕಾದ ವಿರುದ್ಧ ಒಳ್ಳೆಯ ಪ್ರದರ್ಶನ ನೀಡಿದರೆ, ತಂಡಕ್ಕೆ ತುಂಬಾ ಅನುಕೂಲವಾಗಲಿದೆ. ನಾಯಕ ಕೇನ್ ವಿಲಿಯಮ್ಸನ್ ಹಿಂದಿರುಗಿದ ನಂತರ ತಂಡದ ಉತ್ಸಾಹ ಹೆಚ್ಚಾಗಿದೆ.