ಹೈದರಾಬಾದ್:ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಹೆಸರಿಗೆ ತಕ್ಕಂತೆ ಮತ್ತೊಂದು ಇನಿಂಗ್ಸ್ ಕಟ್ಟಿದರು. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಅತಿ ವೇಗವಾಗಿ 26 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಂಡರು. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು.
ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 77 ರನ್ ಗಳಿಸಿದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26 ಸಾವಿರ ರನ್ ಪೂರೈಸಿದರು. 34ರ ಹರೆಯದ ವಿರಾಟ್ 567 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ಸಾಧಿಸಲು 601 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಕ್ರಿಕೆಟ್ ಜಗತ್ತಿನ ನಾಲ್ಕನೇ ಆಟಗಾರ:ವಿರಾಟ್ ಕೊಹ್ಲಿ ದಾಖಲಿಸುವ ಒಂದೊಂದು ರನ್ ಕೂಡ ದಾಖಲೆ ಪುಟ ಸೇರುತ್ತಿವೆ. ಬಾಂಗ್ಲಾ ವಿರುದ್ಧ 34 ರನ್ ಗಳಿಸಿದ್ದಾಗ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರನಾಗಿ ಹೊರಹೊಮ್ಮಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲಿಗರಾಗಿದ್ದಾರೆ. ಅವರು 664 ಪಂದ್ಯಗಳ 782 ಇನ್ನಿಂಗ್ಸ್‌ಗಳಲ್ಲಿ 34,357 ರನ್‌ಗಳ ಶಿಖರವನ್ನೇ ಕಟ್ಟಿದ್ದಾರೆ.