ಧರ್ಮಶಾಲಾ (ಹಿಮಾಚಲ ಪ್ರದೇಶ):ಐಸಿಸಿ ಏಕದಿನ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿಗೆ ತಂಡದ ಕೋಚ್ ರಾಬ್ ವಾಲ್ಟರ್ ಪ್ರಮುಖ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ಡೆತ್ ಓವರ್ಗಳಲ್ಲಿ ಬೌಲಿಂಗ್ ಮತ್ತು ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯದ ಕಾರಣದಿಂದಲೇ ಆಘಾತಕಾರಿ ಸೋಲು ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ ಮಳೆಯ ಅಡ್ಡಿ ನಡುವೆಯೂ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಅಚ್ಚರಿ ಗೆಲುವು ದಾಖಲಿಸಿದೆ. ಏಳನೇ ಕ್ರಮಾಂಕ್ರಮದಲ್ಲಿ ಮೈದಾನಕ್ಕಿಳಿದರೂ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಉಪಯುಕ್ತ ಹಾಗೂ ಜವಾಬ್ದಾರಿಯುತ 78 ರನ್ಗಳ ಬ್ಯಾಟಿಂಗ್ ನೆರವಿನಿಂದ ನೆದರ್ಲ್ಯಾಂಡ್ಸ್ ತಂಡ 246 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ದಕ್ಷಿಣ ಆಫ್ರಿಕಾಗೆ ನೀಡಿತ್ತು. ನಂತರ ಬೌಲಿಂಗ್ನಲ್ಲೂ ಮಿಂಚಿದ್ದ ಕ್ರಿಕೆಟ್ ಜಗತ್ತಿನ 'ಅನನುಭವಿ' ಡಚ್ ಆಟಗಾರರು ಬಲಿಷ್ಠ ಹರಿಣಗಳ ವಿರುದ್ಧ 38 ರನ್ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ನೆದರ್‌ಲ್ಯಾಂಡ್ಸ್ ತಮ್ಮ ವಿಶ್ವಕಪ್ ಇತಿಹಾಸದಲ್ಲಿ ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧದ ಮೊದಲು ಗೆಲುವು ಹಾಗೂ ಒಟ್ಟಾರೆ ವಿಶ್ವಕಪ್ನ ಮೂರನೇ ಜಯ ದಾಖಲಿಸಿ ಸಂಭ್ರಮಿಸಿತ್ತು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಕೋಚ್ ರಾಬ್ ವಾಲ್ಟರ್ ಮಾತನಾಡಿ, ನೆದರ್‌ಲೆಂಡ್ 140ಕ್ಕೆ ಏಳು ವಿಕೆಟ್ ಕಳೆದುಕೊಂಡಾಗ ನಿಜವಾಗಿಯೂ ಆಟದ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೆವು. ಆದರೆ, ಡೆತ್ ಓವರ್ಗಳಲ್ಲಿ ಬೇಗ ಪಂದ್ಯವನ್ನು ಮುಗಿಸಲು ಸಾಧ್ಯವಾಗದಿರುವುದು ನಿರಾಶಾದಾಯಕವಾಗಿದೆ. ಖಂಡಿತವಾಗಿಯೂ ಇದೇ ವೇಗವು ಪಂದ್ಯವನ್ನು ಬದಲಿಸಿತು ಎಂದು ಹೇಳಿದ್ದಾರೆ. ಅಲ್ಲದೇ, ನಾವು 240 ಗುರಿ ಬೆನ್ನಟ್ಟಲು ಸಾಧ್ಯವಾಗುತ್ತಿತ್ತು. ಆದರೆ, ನಂತರ ನಮ್ಮ ಬ್ಯಾಟರ್ಗಳು ಅತ್ಯಂತ ಕಳಪೆ ಆರಂಭಕ್ಕೆ ಕಾರಣರಾದರು. ಬಹುಶಃ ನಿಧಾನಗತಿಯ ಬಾಲ್ ಮತ್ತು ಹಾರ್ಡ್ ಲೆಂತ್ ಮತ್ತು ಆನ್ ಪೇಸ್ ಎಸೆತಗಳ ವಿಷಯದಲ್ಲಿ ನಮ್ಮಲ್ಲಿ ಸ್ವಲ್ಪ ತಪ್ಪಾಗಿರಬಹುದು. ಇದರಲ್ಲಿ ಹೆಚ್ಚಿನ ಎಕ್ಸ್ಟ್ರಾ ರನ್ಗಳು ನೀಡಿರುವ ಪಾಲು ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.