ಧರ್ಮಶಾಲಾ:ನಡೆಯುತ್ತಿರುವ 2023 ಐಸಿಸಿ ಕ್ರಿಕೆಟ್ ವಿಶ್ವಕಪ್ ಹಬ್ಬವು ಹಲವು ಕುತೂಹಲಗಳೊಂದಿಗೆ ಮುನ್ನುಗ್ಗುತ್ತಿದೆ. ಅಫ್ಘಾನಿಸ್ತಾನವು ಭಾನುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಜೊತೆಗೆ ಮಂಗಳವಾರ ನಡೆದ ಮ್ಯಾಚ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಅಚ್ಚರಿ ಫಲಿತಾಂಶವನ್ನು ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾವನ್ನು ದಂಗುಬಡಿಸಿದೆ. ನಡೆಯುತ್ತಿರುವ ಮಾರ್ಕ್ವೀ ಟೂರ್ನಮೆಂಟ್ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನೆದರ್ಲ್ಯಾಂಡ್ಸ್ ತಂಡವು ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಸೋಲಿಸಿತು.
100 ರನ್‌ಗಳ ಒಳಗೆ ಅರ್ಧದಷ್ಟು ತಂಡದ ಆಟಗಾರರು ಔಟಾಗಿದ್ದರಿಂದ ನೆದರ್‌ಲ್ಯಾಂಡ್ಸ್ ತೊಂದರೆಗೀಡಾದ ಸ್ಥಿತಿಯಲ್ಲಿತ್ತು. ಆದರೆ, ಸ್ಕಾಟ್ ಎಡ್ವರ್ಡ್ಸ್ ಪ್ರಬುದ್ಧ ನಾಯಕನ ಸ್ಥಾವನ್ನು ನಿಭಾಯಿಸಿದರು. ಮಳೆಯಿಂದ ಮೊಟಕುಗೊಂಡ ಪಂದ್ಯದಲ್ಲಿ ಸ್ಕಾಟ್ ಅವರು ತಂಡಕ್ಕೆ ಸವಾಲಿನ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. ಮಳೆಯಿಂದಾಗಿ ಆಟವನ್ನು 43 ಓವರ್‌ಗಳಿಗೆ ಇಳಿಕೆ ಮಾಡಲಾಗಿತ್ತು.
ನೆದರ್ಲ್ಯಾಂಡ್ಸ್ ಬೌಲರ್ಗಳು ನಂತರ ಉತ್ತಮ ಪ್ರದರ್ಶನ ನೀಡಿದರು. ಎದುರಾಳಿ ತಂಡ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿ, 38 ರನ್‌ಗಳಿಂದ ಜಯ ದಾಖಲಿಸಿದರು. ನೆದರ್ಲೆಂಡ್ಸ್‌ನ ಗೆಲುವಿನಿಂದ ದಕ್ಷಿಣ ಆಫ್ರಿಕಾದ ಈವರೆಗಿನ ಪಂದ್ಯಾವಳಿಯಲ್ಲಿ ಸಾಗಿದ್ದ ವಿಜಯದ ಸರಣಿಯನ್ನು ಮುರಿದು ಬಿದ್ದಿದೆ.
ನೆದರ್ಲೆಂಡ್ಸ್ ನಾಯಕ ಸ್ಕಾಟ್ ಸಂತಸ: ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಹರ್ಷ ವ್ಯಕ್ತಪಡಿಸಿದ್ದಾರೆ. ''ತಂಡದ ಗೆಲುವಿನಿಂದ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತಸ ತಂದಿದೆ. ನಾವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಂದಿದ್ದೇವೆ. ನಾವು ಉತ್ತಮ ಆಟಗಾರರನ್ನು ಹೊಂದಿದ್ದೇವೆ. ಮೊದಲು ಗೆಲುವು ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆಶಾದಾಯಕವಾಗಿ, ಇನ್ನೂ ಕೆಲವು ಗೆಲುವುಗಳನ್ನು ತಮ್ಮದಾಗಿಸಿಕೊಳ್ಳುತ್ತೇವೆ" ಎಂದು ಎಡ್ವರ್ಡ್ಸ್ ಅವರು, ಮಂಗಳವಾರ ತಡರಾತ್ರಿ ನಡೆದ ಪಂದ್ಯದ ನಂತರದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.