ಕೋಲ್ಕತ್ತಾ(ಪಶ್ಚಿಮ ಬಂಗಾಳ):ಕ್ರಿಕೆಟ್ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇದುವರೆಗೆ ಒಟ್ಟು 12 ವಿಶ್ವಕಪ್ ಕ್ರಿಕೆಟ್ ಆವೃತ್ತಿಗಳು ನಡೆದಿವೆ. ಆಸೀಸ್ ಐದು ಬಾರಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ ನಾಲ್ಕು ಪ್ರಶಸ್ತಿಗಳು ಕಳೆದ ಆರು ಆವೃತ್ತಿಗಳಲ್ಲಿ ಬಂದಿವೆ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ನಾಲ್ಕು ಬಾರಿ ಸೆಮೀಸ್‌ಗೆ ಬಂದರೂ ಸೋಲಿನ ಕಹಿ ಕಂಡು 'ಚೋಕರ್ಸ್' ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ಇದೀಗ ಹರಿಣ ಪಡೆ ಕಪ್ ಜಯಿಸುವ ಸನಿಹ ಬಂದಿದ್ದು, ಬಲಿಷ್ಠ ಕಾಂಗರೂ ತಂಡವನ್ನು ಸೋಲಿಸುವ ಸವಾಲು ಎದುರಿಸುತ್ತಿದೆ. ಈ ಹಿಂದೆ ಆಡಿರುವ ನಾಲ್ಕು ಸೆಮೀಸ್ಗಳ ಪೈಕಿ ಮೂರರಲ್ಲಿ ಇದೇ ಆಸೀಸ್ ಎದುರು ದ.ಆಫ್ರಿಕಾ ಮುಗ್ಗರಿಸಿದೆ. ಆದರೆ, ಈ ಸಲದ ವಿಶ್ವಕಪ್ನಲ್ಲಿ ಟೆಂಬಾ ಬವುಮಾ ನಾಯಕತ್ವದ ಹರಿಣ ಪಡೆ ಎಲ್ಲಾ ವಿಭಾಗಗಳಲ್ಲಿಯೂ ಹೊಸ ಆಯಾಮದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಶತಾಯಗತಾಯ ಆಸೀಸ್ ಮಣಿಸಿ ಚೋಕರ್ಸ್ ಟ್ಯಾಗ್ ನಿಂದ ಹೊರಬರಲು ದಕ್ಷಿಣ ಆಫ್ರಿಕಾ ತವಕಿಸುತ್ತಿದೆ.
ದಕ್ಷಿಣ ಆಫ್ರಿಕಾದ ಸೆಮೀಸ್ ಹಾದಿ..:1992ರ ಮಾರ್ಚ್ 22ರಂದು ಸಿಡ್ನಿಯಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಆದರೆ ಅಂದು ಬಿಟ್ಟೂಬಿಡದೆ ಸುರಿದ ಮಳೆಯಿಂದ ಡಕ್‌ವರ್ತ್ ಲೂಯಿಸ್ ನಿಯಮದ ಮೂಲಕ ತಪ್ಪು ಲೆಕ್ಕಾಚಾರದಿಂದಾಗಿ ದ.ಆಫ್ರಿಕಾ ಸೋಲುಂಡಿತ್ತು.
1999 ಜೂನ್ 17ರಂದು ಇಂಗ್ಲೆಂಡ್ನ ಎಡ್ಜ್ಭಾಸ್ಟನ್ನಲ್ಲಿ ಎರಡನೇ ಬಾರಿ ಸೆಮೀಸ್‌ಗೆ ಲಗ್ಗೆ ಇಟ್ಟಿದ್ದ ದಕ್ಷಿಣ ಆಫ್ರಿಕಾ ಇಲ್ಲಿ ಆಸೀಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯ ಟೈ ಆಗುವ ಮೂಲಕ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತ್ತು. 2007ರ ವಿಶ್ವಕಪ್ನಲ್ಲಿ ಎದುರಾದ ಕಾಂಗರೂಗಳ ವಿರುದ್ಧ ಹರಿಣಗಳ ಪಡೆ ಸೇಂಟ್ ಲೂಸಿಯಾ ಮೈದಾನದಲ್ಲಿ (ಏಪ್ರಿಲ್ 25ರಂದು) ಮೂರನೇ ಬಾರಿ ಸೆಮಿಫೈನಲ್ ಸೋಲಿನ ಕಹಿ ಅನುಭವಿಸಿತು. ಇತ್ತ ಆಸೀಸ್ ಕೂಡ ಮೂರನೇ ಬಾರಿಗೆ ನೇರ ಫೈನಲ್ ಪ್ರವೇಶಿಸಿತ್ತು.