ಪುಣೆ (ಮಹಾರಾಷ್ಟ್ರ):ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಸಂದರ್ಭದಲ್ಲಿ ಅನುಭವಿಸಿದ ಹೆಬ್ಬೆರಳ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ. ನಾಯಕ ಟಾಮ್ ಲ್ಯಾಥಮ್ ಕಿವೀಸ್ ತಂಡ ಮುನ್ನಡೆಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಾಯಗೊಂಡು ಬಳಲುತ್ತಿದ್ದ 33 ವರ್ಷದ ವಿಲಿಯಮ್ಸನ್, 2023ರ ಕ್ರಿಕೆಟ್ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡ ನಂತರ ಯಶಸ್ವಿಯಾಗಿ ಚೇತರಿಸಿಕೊಂಡಿದ್ದರು. ನಂತರ, ಬಾಂಗ್ಲಾದೇಶ ವಿರುದ್ಧ ಆಡಿದ್ದರು. ಆದ್ರೆ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ, ಫೀಲ್ಡರ್ ಥ್ರೋನಿಂದ ವಿಲಿಯಮ್ಸನ್ ಹೆಬ್ಬೆರಳಿಗೆ ಗಾಯವಾಗಿದೆ. ಇದರಿಂದ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ನಿನ್ನೆ ತಡರಾತ್ರಿಯ ಬೆಳವಣಿಗೆಯಲ್ಲಿ, ನ್ಯೂಜಿಲೆಂಡ್ ಕ್ರಿಕೆಟ್ ಸಾಮಾಜಿಕ ತಾಣವಾದ 'ಎಕ್ಸ್' ಪೋಸ್ಟ್ ಮೂಲಕ ''ಕೇನ್ ವಿಲಿಯಮ್ಸನ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಿಂದ ಹೊರಗಿಡಲಾಗಿದೆ'' ಎಂದು ಬಹಿರಂಗಪಡಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ಪ್ರಕಾರ, ''ಕಳೆದ ಎರಡು ದಿನಗಳಲ್ಲಿ ವಿಲಿಯಮ್ಸನ್ ಅವರು ನೆಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಮರಳುವುದಕ್ಕೂ ಮುನ್ನವೇ ಅವರನ್ನು ಹೊರಗಿಡಲಾಗಿದೆ. ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯಕ್ಕೂ ಮುನ್ನ ಸಾಮಾನ್ಯ ಕಿವೀಸ್ ನಾಯಕನನ್ನು ಮರು ಮೌಲ್ಯಮಾಪನ ಮಾಡಲಾಗುವುದು ಎಂದು ತಿಳಿಸಿದೆ.
ಕೇನ್ ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ, ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸುವತ್ತ ಹೆಜ್ಜೆ ಇಟ್ಟಿದೆ. ತಮ್ಮ ಅಭಿಯಾನದ ಗೆಲುವಿನ ಆರಂಭದ ನಂತರ, ಅವರು ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೋಲುಗಳನ್ನು ಅನುಭವಿಸಿದ್ದರು. ಪುಣೆ ನಗರದ ಹೊರವಲಯದಲ್ಲಿರುವ ಗಹುಂಜೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಬುಧವಾರದ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ರನ್ಗಳ ಹಬ್ಬವನ್ನು ನಿರೀಕ್ಷಿಸಬಹುದು. ಗೆಲುವಿನ ಹಾದಿಗೆ ಮರಳಲು ನ್ಯೂಜಿಲೆಂಡ್ ತುಂಬಾ ಉತ್ಸುಕರಾಗಿದ್ದರೂ, ಗೆಲುವಿಗಾಗಿ ಹಾತೊರೆಯುತ್ತಿರುವ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕಠಿಣ ಪರೀಕ್ಷೆ ಎದುರಿಸಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ (ಪ್ರಥಮ) ಮತ್ತು ದಕ್ಷಿಣ ಆಫ್ರಿಕಾ (ದ್ವಿತೀಯ) ನಂತರ, ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಬಾವುಟ ಪ್ರದರ್ಶಿಸಿದ ನಾಲ್ವರ ಬಂಧನ, ಬಿಡುಗಡೆ