ಕೋಲ್ಕತ್ತಾ:ಹೆಚ್ಚೂ ಕಡಿಮೆ ವಿಶ್ವಕಪ್ ಅಭಿಯಾನದಿಂದ ಹೊರಬಿದ್ದಿರುವ ಬಾಂಗ್ಲಾದೇಶ, ಇದೇ ಹಾದಿಯಲ್ಲಿರುವ ಪಾಕಿಸ್ತಾನವನ್ನು ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಎದುರಿಸಲಿದೆ. ಇತ್ತಂಡಗಳು ನೀಡಿದ ನೀರಸ ಪ್ರದರ್ಶನ ಸೆಮೀಸ್ ರೇಸ್ನಿಂದ ಹೊರಬೀಳುವಂತೆ ಮಾಡಿದೆ. ಬಾಂಗ್ಲಾಗಿಂತಲೂ ಹೆಚ್ಚು ಪಾಕಿಸ್ತಾನ ಟೀಕೆಗೆ ಗುರಿಯಾಗಿದೆ. ಆದರೆ, ತಂಡವು ಭಾರತದ ವಾತಾವರಣ ಮತ್ತು ಪಿಚ್ ಅನ್ನು ದೂಷಿಸಿದೆ.
ಸದ್ಯ ಪಾಕಿಸ್ತಾನ ತಾನಾಡಿದ 6 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಕಂಡಿದೆ. 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಪಂದ್ಯದಲ್ಲಿ 1 ವಿಕೆಟ್‌ನಿಂದ ಸೋಲನುಭವಿಸಬೇಕಾಯಿತು. ಪಾಕಿಸ್ತಾನವು ದಕ್ಷಿಣ ಆಫ್ರಿಕಾಕ್ಕೆ 270 ರನ್‌ಗಳ ಗುರಿಯನ್ನು ನೀಡಿತು. ಕೊನೆಯವರೆಗೂ ಹೋರಾಟ ನಡೆಸಿದಾಗ್ಯೂ ತಂಡ ಗೆಲುವಿನ ದಡ ಮುಟ್ಟಲಿಲ್ಲ. ಇದರಿಂದ ಸೆಮೀಸ್ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಈ ಪಂದ್ಯವನ್ನು ಗೆದ್ದಲ್ಲಿ 6 ಅಂಕಗಳೊಂದಿಗೆ ಆಫ್ಘನ್ ಕೆಳಗೆ ತಳ್ಳಿ 5ನೇ ಸ್ಥಾನಕ್ಕೆ ಬರಲಿದೆ. ಸೋತಲ್ಲಿ ಮತ್ತಷ್ಟು ಕುಸಿತ ಕಾಣಲಿದೆ.
ಬಾಂಗ್ಲಾಗೆ ಔಪಚಾರಿಕ ಪಂದ್ಯ:ಬಾಂಗ್ಲಾ ಹುಲಿಗಳಿಗೆ ಈ ಪಂದ್ಯ ಔಪಚಾರಿಕ ಎಂಬಂತಾಗಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ 5 ಸೋತು 1 ರಲ್ಲಿ ಗೆಲುವು ಸಾಧಿಸಿದೆ. ಇದರಿಂದ ಉಳಿದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಸೆಮೀಸ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಕಳೆದ ಶನಿವಾರ ಇದೇ ಮೈದಾನದಲ್ಲಿ ನೆದರ್ಲೆಂಡ್ಸ್ ವಿರುದ್ಧ 87 ರನ್‌ಗಳ ಆಘಾತಕಾರಿ ಸೋಲನ್ನು ಎದುರಿಸಬೇಕಾಯಿತು. 229 ರನ್‌ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಟೈಗರ್ಸ್ ಡಚ್ಚರ ಬೌಲಿಂಗ್ ದಾಳಿಗೆ ಸಿಲುಕಿ 42.2 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಗಿತ್ತು.
ತಂಡಗಳ ಮುಖಾಮುಖಿ:ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೂ 38 ಏಕದಿನ ಪಂದ್ಯಗಳಲ್ಲಿ ಎದುರಾಗಿವೆ. ಇದರಲ್ಲಿ ಪಾಕಿಸ್ತಾನ 33 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ 5 ರಲ್ಲಿ ಜಯಿಸಿದೆ. ಬಾಂಗ್ಲಾ ಮೇಲೆ ಪೂರ್ಣ ಪ್ರಾಬಲ್ಯ ಮೆರೆದಿರುವ ಪಾಕ್ ಈ ಪಂದ್ಯದಲ್ಲಿ ಗೆದ್ದು ಸೆಮೀಸ್ ರೇಸ್ನಲ್ಲಿ ಉಳಿದುಕೊಳ್ಳಲು ಪ್ಲಾನ್ ಮಾಡಿದೆ.