ಲಖನೌ (ಉತ್ತರಪ್ರದೇಶ):ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಿದ್ದಾರೆ. ಲಖನೌದಲ್ಲಿ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ 34ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ತಮ್ಮ ಮೊದಲ ವಿಕೆಟ್‌ನೊಂದಿಗೆ ಈ ಸಾಧನೆಯನ್ನು ಮಾಡಿದರು. ಮುಜೀಬ್ ಈ ಸಾಧನೆ ಮಾಡಿದ ಆಫ್ಘಾನಿಸ್ತಾನದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಮುಜೀಬ್ ಜಂಟಿಯಾಗಿ ಅತಿವೇಗದ 100 ODI ವಿಕೆಟ್‌ಗಳನ್ನು ಪಡೆದ ಎರಡನೇ ಅಫ್ಘಾನ್ ಬೌಲರ್ ಸಹ ಆಗಿದ್ದಾರೆ.
2017ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮುಜೀಬ್ 73 ಪಂದ್ಯಗಳಲ್ಲಿ ಏಕದಿನ ವಿಕೆಟ್‌ಗಳ ಶತಕ ಪೂರೈಸಿ ದೌಲತ್ ಝದ್ರಾನ್ ಅವರನ್ನು ಸರಿಗಟ್ಟಿದರು. ಅಫ್ಘಾನ್ ಆಟಗಾರರ ಪೈಕಿ ರಶೀದ್ ಖಾನ್ ಅವರು 44 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ರಶೀದ್ (178), ಜದ್ರಾನ್ (115) ಮತ್ತು ಮುಜೀಬ್ ಹೊರತುಪಡಿಸಿ, ಮೊಹಮ್ಮದ್ ನಬಿ (157) ಅಫ್ಘಾನಿಸ್ತಾನ ಪರ 100 ಕ್ಕೂ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್ಗಳು ಆಗಿದ್ದಾರೆ. 22 ವರ್ಷದ ಆಟಗಾರ 23 ODI ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಮುಜೀಬ್ ಏಕದಿನ ಪಂದ್ಯಗಳಲ್ಲಿ ಮೂರು ಬಾರಿ ನಾಲ್ಕು ವಿಕೆಟ್ ಮತ್ತು ಒಂದು ಬಾರಿ ಐದು ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ.
ಈ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಗೆಲುವು ಅಫ್ಘಾನಿಸ್ತಾನಕ್ಕೆ ನಾಲ್ಕನೇ ಜಯವಾಗಿದೆ. ಅಫ್ಘಾನಿಸ್ತಾನ ಈ ಹಿಂದೆ ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸಿದ್ದರು. ನೆದರ್ಲೆಂಡ್ಸ್ ವಿರುದ್ಧ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನವನ್ನು ತೋರಿತು. ಅತ್ಯುತ್ತಮ ಫೀಲ್ಡಿಂಗ್ ಮತ್ತು ಬೌಲಿಂಗ್ ನಡೆಸಿದ ಅಫ್ಘಾನ ನೆದರ್ಲೆಂಡ್ಸ್ ತಂಡವನ್ನು 179 ಕ್ಕೆ ಕಟ್ಟಿ ಹಾಕಿತು. ನಂತರ ಅತ್ಯಂತ ಸುಲಭವಾಗಿ ಗುರಿಯನ್ನು ಬೆನ್ನಟ್ಟಿದರು. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ವಿಶ್ವಕಪ್‌ನಲ್ಲಿ ಇದು ನಾಲ್ಕನೇ ಗೆಲುವು ಆಗಿದೆ.