ಪುಣೆ:ಏಕದಿನ ವಿಶ್ವಕಪ್ ಕ್ರಿಕೆಟ್‌ನ ಇಂದಿನ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ್ದ 256 ರನ್‌ಗಳ ಗುರಿ ಬೆನ್ನತ್ತಿದ ಭಾರತ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ನಗೆಬೀರಿತು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾ ದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಜೋಡಿಗಳಾದ ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ 93 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅರ್ಧಶತಕ ಸಿಡಿಸಿದ್ದ ತಂಜಿದ್ ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ನಾಯಕ ಶಾಂಟೋ (8), ಮೆಹೆದಿ ಹಸನ್(3) ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ಉಳಿಯದೇ ಪೆವಿಲಿಯನ್ ಸೇರಿದರು. ಮತ್ತೊಂದೆಡೆ, ಅರ್ಧಶತಕ ಪೂರೈಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ (66) ಜಡೇಜಾ ಬಲೆಗೆ ಬಿದ್ದರು. ಉಳಿದಂತೆ, ಮುಶ್ಪಿಫಿಕರ್ ರೆಹಮಾನ್ (38), ಮೊಹ್ಮದುಲ್ಲಾ (48) ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿತು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಭಾರತ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ (48) ಮತ್ತು ಶುಭ್‌ಮನ್ ಗಿಲ್ (53) 88 ರನ್‌ಗಳ ಜತೆಯಾಟವಾಡಿದರು. ಬೌಂಡರಿಗಳನ್ನು ಸಿಡಿಸುತ್ತಾ ಸ್ಫೋಟಕ ಪ್ರದರ್ಶನ ತೋರುತ್ತಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಹಸನ್ ಮಹ್ಮುದ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದರ ನಂತರ ಅರ್ಧಶತಕ ಪೂರೈಸಿದ್ದ ಗಿಲ್ ಮತ್ತು ಶ್ರೇಯಸ್ ಐಯರ್ ಮೆಹೆದಿ ಹಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.