ಅಹಮದಾಬಾದ್(ಗುಜರಾತ್):ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಫೈನಲ್ ಪ್ರವೇಶಿಸಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯಕ್ಕಾಗಿ ಸಾಕಷ್ಟು ಕಾತರರಾಗಿದ್ದಾರೆ. ನವೆಂಬರ್ 19ರಂದು ಅಹಮದಾಬಾದ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್‌ಪ್ರೇಮಿಗಳು ಅಹಮದಾಬಾದ್‌ಗೆ ಆಗಮಿಸುತ್ತಿದ್ದಾರೆ. ಆದರೆ, ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದಾಗಿನಿಂದಲೂ ಇಲ್ಲಿನ ಹೋಟೆಲ್ ಕೊಠಡಿಗಳ ಬೆಲೆ ಗಗನಕ್ಕೇರಿದೆ. ವಿಮಾನ ಟಿಕೆಟ್‌ಗಳ ದರವೂ ವಿಪರೀತ ಏರಿಕೆಯಾಗಿದೆ.
ಸಾಮಾನ್ಯವಾಗಿ ಅಹಮದಾಬಾದ್‌ನಲ್ಲಿ ಐಷಾರಾಮಿ ಹೋಟೆಲ್ ರೂಂ ಬೆಲೆ (ಒಂದು ರಾತ್ರಿಗೆ) ಸುಮಾರು 10 ಸಾವಿರ ರೂಪಾಯಿ ಇರುತ್ತದೆ. ಆದರೆ ಸದ್ಯ ಫೋರ್ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‌ಗಳ ಬೆಲೆಗಳು ಬೆಚ್ಚಿ ಬೀಳಿಸುವಂತಿವೆ. ಒಂದು ಕೊಠಡಿ ಬಾಡಿಗೆಗೆ ಪಡೆಯಲು ರಾತ್ರಿಗೆ ರೂ.1 ಲಕ್ಷ ರೂ.ವರೆಗೂ ಪಾವತಿಸಬೇಕಿದೆ. ಇತರೆ ಐಷಾರಾಮಿ ಹೋಟೆಲ್ ಮಾಲೀಕರು 24 ಸಾವಿರದಿಂದ 2 ಲಕ್ಷದ 15 ಸಾವಿರ ರೂ.ವರೆಗೂ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಮುಖ ಆಂಗ್ಲ ಮಾಧ್ಯಮಗಳು ಹಲವು ವರದಿಗಳಲ್ಲಿ ಬಹಿರಂಗಪಡಿಸಿವೆ. ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆಯೂ ಸಹ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಭಾರಿ ಏರಿಕೆ ಕಂಡಿದ್ದವು.