ಬೆಂಗಳೂರು (ಕರ್ನಾಟಕ): ''ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂಬತ್ತು ಲೀಗ್ ಪಂದ್ಯಗಳಲ್ಲಿ ತಮ್ಮ ತಂಡವು ಹೇಗೆ ಪ್ರದರ್ಶನ ನೀಡಿತು ಎಂಬುದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ'' ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವು ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಮಣಿಸಿತು.
ನೆದರ್ಲೆಂಡ್ಸ್ ತಂಡವನ್ನು ಸೋಲಿಸಲು ಭಾರತ ಆಲ್ ರೌಂಡ್ ಪ್ರದರ್ಶನವನ್ನು ನೀಡಿತು. ಮೊದಲು ಶ್ರೇಯಸ್ ಅಯ್ಯರ್ ಅಜೇಯರಾಗಿ 128 ರನ್ ಗಳಿಸಿದರು ಹಾಗೂ ಕೆ ಎಲ್ ರಾಹುಲ್ 102 ರನ್‌ಗಳ ಕಲೆ ಹಾಕಿದ್ದರಿಂದ ತಂಡವು 410/4 ಬೃಹತ್ ಮೊತ್ತವನ್ನು ದಾಖಲಿಸಿತು. ನಂತರ ಎದುರಾಳಿಗಳನ್ನು 250 ರನ್‌ಗಳಿಗೆ ಆಲೌಟ್ ಮಾಡಿ ಸುಲಭ ಗೆಲುವು ದಾಖಲಿಸಿತು.
ನಾಯಕ ರೋಹಿತ್ ಶರ್ಮಾ ಮಾತು:"ನಾವು ಪಂದ್ಯಾವಳಿಯನ್ನು ಪ್ರಾರಂಭಿಸಿದಾಗಿನ ಸಮಯದಿಂದಲೂ ಆಟವನ್ನು ಚೆನ್ನಾಗಿ ಆಡಬೇಕು ಎಂದು ಯೋಚಿಸಿದ್ದೇವೆ. ನಾವು ಎಂದಿಗೂ ಹೆಚ್ಚು ಮುಂದೆ ನೋಡಲು ಬಯಸುವುದಿಲ್ಲ, ಏಕೆಂದರೆ ಇದು ಸುದೀರ್ಘ ಪಂದ್ಯಾವಳಿಯಾಗಿದೆ. ಆಟದ ಮೇಲೆ ಕೇಂದ್ರೀಕರಿಸಿ, ಅದನ್ನು ಚೆನ್ನಾಗಿ ಆಡಿದ್ದೇವೆ'' ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.
''ಒಂಬತ್ತು ವಿವಿಧ ಸ್ಥಳಗಳಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ತಂಡದ ಆಟಗಾರರು ಹೊಂದಿಕೊಂಡಿದ್ದಾರೆ, ಜೊತೆಗೆ ಆಡುತ್ತಿದ್ದಾರೆ. ನಾವು ಈ ಒಂಬತ್ತು ಪಂದ್ಯಗಳಲ್ಲಿ ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ತುಂಬಾ ಸಂತೋಷವಾಗಿದೆ. ಮೊದಲನೇ ಪಂದ್ಯದಿಂದ ಇಂದಿನವರೆಗೆ ತುಂಬಾ ನಿಖರವಾಗಿ ಆಡಿದ್ದೇವೆ. ತಂಡದ ವಿಭಿನ್ನ ಆಟಗಾರರು ವಿಭಿನ್ನ ಸಮಯಗಳಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡು ಮತ್ತು ತಂಡಕ್ಕಾಗಿ ಶ್ರಮಿಸಿರುವುದು ಉತ್ತಮ ಸಂಕೇತವಾಗಿದೆ'' ಎಂದರು.