ಹೈದರಾಬಾದ್: ಯಾವುದೇ ಪಂದ್ಯದಲ್ಲಿ ಅಂಪೈರ್ ನಿರ್ಧಾರ ಪ್ರಮುಖವಾಗುತ್ತದೆ. ಕೆಲ ತಪ್ಪು ನಿರ್ಣಯಗಳು ಪಂದ್ಯದ ಗತಿ ಹಾಗೂ ದಿಕ್ಕನ್ನೇ ಬದಲಾಯಿಸುತ್ತದೆ. ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಾಬರ್ ಅಜಮ್ ನೇತೃತ್ವದ ತಂಡವನ್ನು ಸೋಲಿಸಿತು. ಈ ಸೋಲು ಪಾಕಿಸ್ತಾನಕ್ಕೆ ವಿಶ್ವಕಪ್ನಲ್ಲಿ ಮುಂದಿನ ಪ್ಲೇ ಆಫ್ ಹಂತದ ಪ್ರವೇಶಕ್ಕೆ ಮುಳುವಾಗಿದೆ ಎಂದೇ ಹೇಳಬಹುದು.
ದಕ್ಷಿಣ ಆಫ್ರಿಕಾ 33 ಓವರ್‌ಗಳಲ್ಲಿ 206/4 ಸ್ಕೋರ್‌ನಲ್ಲಿದ್ದಾಗ ಮತ್ತು ಗೆಲುವಿಗೆ ಕೇವಲ 65 ರನ್‌ಗಳ ಅಗತ್ಯವಿರುವಾಗ ಪಾಕಿಸ್ತಾನದ ಬೌಲರ್‌ಗಳು ವೇಗವಾಗಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪುನರಾಗಮನ ಮಾಡಿದರು. ಆದಾಗ್ಯೂ, ಹರಿಣಗಳು ಕೈಯಲ್ಲಿ ಒಂದು ವಿಕೆಟ್ ಮತ್ತು 16 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿದರು. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್ ಮಾಡುವಾಗ 46 ನೇ ಓವರ್‌ನ ಕೊನೆಯ ಎಸೆತದಲ್ಲಿ ಎಲ್ಬಿಡಬ್ಲೂ ನಿರ್ಣಯ ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ನ ಕೊನೆಯ 10 ಓವರ್ ಹೆಚ್ಚು ಕುತೂಹಲಕಾರಿಯಾಗಿತ್ತು. 46 ನೇ ಓವರ್‌ನ ಹ್ಯಾರಿಸ್ ರೌಫ್ ಎಸೆತ ತಬ್ರೈಜ್ ಶಮ್ಸಿ ಪ್ಯಾಡ್‌ಗೆ ತಗುಲಿತ್ತು. ಅಂಪೈರ್ ಬಾಲ್ ವಿಕೆಟ್ಗೆ ತಗುಲುವುದು ಅನುಮಾನ ಎಂದು ನಾಟ್ಔಟ್ ನಿರ್ಧಾರ ಪ್ರಕಟಿಸಿದರು. ಪಾಕಿಸ್ತಾನ ತಂಡ ಡಿಆರ್ಎಸ್ ಮನವಿ ಮಾಡಿತು. ಡಿಆರ್ಎಸ್ ಬಾಲ್ ಟ್ರ್ಯಾಕಿಂಗ್ನಲ್ಲಿ ಲೆಗ್ ಸ್ಟಂಪ್‌ಗೆ ಚೆಂಡು ತಗುಲಿತಾದರೂ ಅಂಪೈರ್ ನಾಟ್ಔಟ್ ಕೊಟ್ಟಿದ್ದರಿಂದ ಪಾಕಿಸ್ತಾನ ರಿವೀವ್ ಕಳೆದುಕೊಂಡಿತು. ಈ ಘಟನೆಯ ನಂತರ, ಅನೇಕ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ತಜ್ಞರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಡಿಆರ್ಎಸ್ ನಿಯಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕೆಟ್ಟ ನಿರ್ಧಾರ:ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ, ಐಸಿಸಿ ನಿರ್ಣಯಕ್ಕೆ ಕಿಡಿಕಾರಿದ್ದಾರೆ. "ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮದಿಂದ ಪಾಕಿಸ್ತಾನ ಈ ಪಂದ್ಯವನ್ನು ಕಳೆದುಕೊಂಡಿದೆ. ಐಸಿಸಿ ಈ ನಿಯಮವನ್ನು ಬದಲಾಯಿಸಬೇಕು.. ಚೆಂಡು ಸ್ಟಂಪ್‌ಗೆ ಬಡಿಯುತ್ತಿದ್ದರೆ ಅದು ಅಂಪೈರ್ ಔಟ್ ಕೊಟ್ಟಿರಲಿ ಅಥವಾ ನಾಟ್ಔಟ್ ಕೊಟ್ಟಿರಲಿ ಅದು ಔಟ್ ಎಂದೇ ಆಗಬೇಕು. ಇಲ್ಲದಿದ್ದರೆ ತಂತ್ರಜ್ಞಾನದ ಉಪಯೋಗವೇನು???" ಎಂದು ಪ್ರಶ್ನಿಸಿದ್ದಾರೆ.