ಧರ್ಮಶಾಲ (ಹಿಮಾಚಲ ಪ್ರದೇಶ): ಏಕದಿನ ವಿಶ್ವಕಪ್ (World Cup) ಸರಣಿಯ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್ ಬೌಲ್ಟ್ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಬೌಲಿಂಗ್ ದಂತಕಥೆಗಳಾದ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿ, ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಭಾನುವಾರದಂದು ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ವೇಗಿ ಬೌಲ್ಟ್ 10 ಓವರ್ಗಳ ಬೌಲಿಂಗ್ ಮಾಡಿ 60ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆಯುವ ಮೂಲಕ ಈ ಮೈಲಿಗಲ್ಲನ್ನು ಸಾಧಿಸಿದರು. ಈ ವರೆಗೂ 24 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಬೌಲ್ಟ್ 23.44ರ ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. 27ರನ್ಗಳಿಗೆ 5ವಿಕೆಟ್ ಪಡೆದಿದರುವುದು ವಿಶ್ವಕಪ್ನಲ್ಲಿ ಇವರ ಬೆಸ್ಟ್ ಬೌಲಿಂಗ್ ಆಗಿದೆ. ಸದ್ಯ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಪರ ಹೆಚ್ಚಿನ ವಿಕೆಟ್ ಪಡೆದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ.
ಭಾರತದ ಮಾಜಿ ಬೌಲರ್ಗಳಾದ ಜಹೀರ್ ಖಾನ್ 23 ಮತ್ತು ಜಾವಗಲ್ ಶ್ರೀನಾಥ್ 34 ವಿಶ್ವಕಪ್ ಪಂದ್ಯಗಳಲ್ಲಿ ತಲಾ 44 ವಿಕೆಟ್ ಪಡೆದಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್‌ಗ್ರಾತ್ ಇದ್ದಾರೆ. ಅವರು 39 ಪಂದ್ಯಗಳಲ್ಲಿ 18.19 ರ ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದು 3.96 ರ ಎಕಾನಮಿ ಹೊಂದಿದ್ದಾರೆ. 15 ರನ್ಗಳಿಗೆ 7 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಆಗಿದೆ.