ಮುಂಬೈ: ವಾಂಖೆಡೆ ಮೈದಾನದಲ್ಲಿ ಬುಧವಾರ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿ ಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು 70 ರನ್ಗಳಿಂದ ಬಗ್ಗು ಬಡಿದ ಭಾರತ ಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್‌ನ 7 ವಿಕೆಟ್ ಕಿತ್ತ ಭಾರತದ ವೇಗಿ ಮೊಹಮ್ಮದ್ ಶಮಿ ಗೆಲುವಿನ ರೂವಾರಿಯಾದರು.
'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದು ಮಾತನಾಡಿರುವ ಶಮಿ, ತಮ್ಮ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. "ಇಂಥ ಅವಕಾಶಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ. ನಾನು ಹೆಚ್ಚು ವೈಟ್ ಬಾಲ್ ಕ್ರಿಕೆಟ್ ಆಡಿರಲಿಲ್ಲ. ಧರ್ಮಶಾಲಾದಲ್ಲಿ ನಡೆದ ನ್ಯೂಜಿಲೆಂಟ್ ವಿರುದ್ಧದ ಲೀಗ್ ಪಂದ್ಯದಲ್ಲಿ ನನ್ನ ಪುನರಾಗಮನವಾಯಿತು. ಬೌಲಿಂಗ್ ಮಾಡುವಾಗ ನಾವು ಬಹಳಷ್ಟು ವ್ಯತ್ಯಾಸಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ನಾನು ಹೊಸ ಬಾಲ್‌ನಲ್ಲಿ ಎದುರಾಳಿಯ ವಿಕೆಟ್ ಪಡೆಯುವುದನ್ನು ಎದುರು ನೋಡುತ್ತಿರುತ್ತೇನೆ" ಎಂದರು.
"ನಾನು ಕೇನ್ ವಿಲಿಯಮ್ಸನ್ ಕ್ಯಾಚ್ ಕೈ ಬಿಟ್ಟೆ. ಇದು ಚರ್ಚೆಯ ವಿಷಯವಾಗಿರಬಹುದು. ಆದರೆ, ನನ್ನ ಬೌಲಿಂಗ್ನಲ್ಲಿ ಶ್ರೀಘ್ರವೇ ಕೇನ್ ಮತ್ತು ಲ್ಯಾಥಮ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದೆ. ವಿಕೆಟ್ ತುಂಬಾ ಚೆನ್ನಾಗಿತ್ತು. ಹೀಗಾಗಿ ಮಧ್ಯಾಹ್ನದ ವೇಳೆಗೆ ಸಾಕಷ್ಟು ರನ್ ಗಳಿಸಲು ಸಾಧ್ಯವಾಯಿತು. ಸಂಜೆ ಇಬ್ಬನಿಯ ಭಯವಿತ್ತು. ಒಂದು ವೇಳೆ ಇಬ್ಬನಿ ಇದ್ದಲ್ಲಿ ಚೆಂಡು ಜಾರುತ್ತದೆ. ಹೆಚ್ಚು ರನ್ ಹರಿದು ಬರುವ ಅವಕಾಶವಿರುತ್ತದೆ. 2015 ಮತ್ತು 2019ರ ಎರಡು ವಿಶ್ವಕಪ್‌ಗಳಲ್ಲಿ ನಾವು ಸೆಮಿ ಫೈನಲ್‌ನಲ್ಲಿ ಸೋತಿದ್ದೇವೆ. ಈ ಅವಕಾಶ ಕೈ ಚೆಲ್ಲಿದರೆ ನಮಗೆ ಮತ್ತೆ ಯಾವಾಗ ಅವಕಾಶ ಸಿಗುತ್ತದೋ ಯಾರಿಗೆ ಗೊತ್ತು? ಆದ್ದರಿಂದ ನಾವು ಇದಕ್ಕಾಗಿ ಎಲ್ಲವನ್ನೂ ಮಾಡಲು ಬಯಸಿದ್ದೇವೆ" ಎಂದು ಹೇಳಿದರು.
ಸೆಮಿ ಫೈನಲ್ ಪ್ರದರ್ಶನ:2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತದ ಕಪ್ ಗೆಲ್ಲುವ ಕನಸಿಗೆ ನ್ಯೂಜಿಲೆಂಡ್ ತಣ್ಣೀರೆರಚಿತ್ತು. ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕರು ಉತ್ತಮ ಅಡಿಪಾಯ ಹಾಕದಂತೆ ಶಮಿ ನೋಡಿಕೊಂಡು, ವಿಕೆಟ್ ಉರುಳಿಸಿದರು. 9.5 ಓವರ್ ಮಾಡಿದ ಅವರು 5.80 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 57 ರನ್ ಕೊಟ್ಟು 7 ವಿಕೆಟ್‌ಗಳ ಗೊಂಚಲು ಪಡೆದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 7 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿಗೂ ಶಮಿ ಒಳಗಾದರು. ಅಲ್ಲದೆ, ಭಾರತದ ಪರ ವಿಶ್ವಕಪ್ನಲ್ಲಿ ಅತಿ ಹೆಚ್ಚು, ಅತಿ ವೇಗದ 50 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯೂ ಶಮಿ ಪಾಲಾಯಿತು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ಮಣಿಸಿ ಫೈನಲ್ಗೇರಿದ ಭಾರತ; ಸಪ್ತ ವಿಕೆಟ್ ಪಡೆದು ಮಿಂಚಿದ ಶಮಿ