ಚೆನ್ನೈ (ತಮಿಳುನಾಡು):ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ಸೌದ್ ಶಕೀಲ್ ಅವರ ಅರ್ಧಶತಕದ ನೆರವಿನಿಂದ 46.3 ಓವರ್ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 270 ರನ್ ಗಳಿಸಿತು. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.
ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಆಜಂ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಈಗಾಗಲೇ ಗೆದ್ದ ನಾಲ್ಕು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತ್ತು. ನೆದರ್ಲೆಂಡ್ಸ್ ವಿರುದ್ಧ ಎರಡನೇ ಬ್ಯಾಟಿಂಗ್ ವೇಳೆ ಸೋಲನುಭವಿಸಿತ್ತು. ಬಾಬರ್ ಇದೇ ಲೆಕ್ಕಾಚಾರ ಹಾಕಿಕೊಂಡಂತೆ ಕಾಣುತ್ತಿದೆ. ಅಲ್ಲದೇ ಚೆನ್ನೈ ಸ್ಪಿನ್ ಪಿಚ್ನಲ್ಲಿ ಚಂದ್ರನ ಬೆಳಕಿನಡಿಯಲ್ಲಿ ಗೆದ್ದು ಪ್ಲೇ ಆಫ್ ಜೀವಂತವಾಗಿ ಉಳಿಸಿಕೊಳ್ಳುವ ಚಿಂತನೆ ತಂಡದ್ದಾಗಿದೆ.
ಮೈದಾನಕ್ಕಿಳಿದ ಪಾಕ್ ಆರಂಭಿಕರಿಗೆ ಮಾರ್ಕೊ ಜಾನ್ಸೆನ್ ಕಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಅಬ್ದುಲ್ಲಾ ಶಫೀಕ್ ಕೇವಲ 9 ರನ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಜಾನ್ಸೆನ್ ಇಮಾಮ್-ಉಲ್-ಹಕ್ (12) ಅವರ ವಿಕೆಟ್ ಕಿತ್ತರು. ಮೂರನೇ ವಿಕೆಟ್ಗೆ ಜೊತೆಯಾದ ನಾಯಕ ಬಾಬರ್ ಆಜಂ ಒಂದು ಬದಿಯಲ್ಲಿ ವಿಕೆಟ್ ನಿಲ್ಲಿಸಿದರಾದರೂ, ಅವರಿಗೆ ಯಾರೂ ಸಾಥ್ ಕೊಡಲಿಲ್ಲ. ಮೊಹಮ್ಮದ್ ರಿಜ್ವಾನ್ (31) ಮತ್ತು ಇಫ್ತಿಕರ್ ಅಹ್ಮದ್ (21) ನಾಯಕನೊಂದಿಗೆ ಕ್ರಮವಾಗಿ 48 ಮತ್ತು 43 ರನ್ಗಳ ಜೊತೆಯಾಟವಾಡಿ ವಿಕೆಟ್ ಕೊಟ್ಟರು.
ಶತಕ ಕಾಣದ ಬಾಬರ್:ಪಾಕಿಸ್ತಾನ ನಾಯಕ ಬಾಬರ್ ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಗಳಲ್ಲಿ ಸತತ ಶತಕಗಳ ಮೂಲಕ ದಾಖಲೆ ಮಾಡುತ್ತಿದ್ದರು. ಆದರೆ ಏಷ್ಯಾಕಪ್ ಮತ್ತು ವಿಶ್ವಕಪ್ನಂತಹ ಮಹತ್ವದ ಟೂರ್ನಿಯಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಪಿಚ್ಗೆ ಹೊಂದಿಕೊಂಡು ಇನ್ನಿಂಗ್ಸ್ ಕಟ್ಟುತ್ತಿದ್ದ ಅವರು ಅರ್ಧಶತಕವಾದ ಕೂಡಲೇ ವಿಕೆಟ್ ಕಳೆದುಕೊಂಡರು. ಇನ್ನಿಂಗ್ಸ್ನಲ್ಲಿ 65 ಬಾಲ್ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸ್ನಿಂದ 50 ರನ್ ಕಲೆಹಾಕಿದರು.
ಶಕೀಲ್, ಶಾಬಾದ್ ಜೊತೆಯಾಟ: 6ನೇ ವಿಕೆಟ್ಗೆ ಒಂದಾದ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಜೋಡಿ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಆಸರೆಯಾದರು. ಈ ಜೋಡಿ 6ನೇ ವಿಕೆಟ್ಗೆ 84 ರನ್ಗಳ ಜೊತೆಯಾಟ ಮಾಡಿತು. ವೇಗವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದ ಶಾಬಾದ್ ಖಾನ್ 43 ರನ್ ಗಳಿಸಿದ್ದಾಗ ವಿಕೆಟ್ ಕೊಟ್ಟರು. ಶಾಬಾದ್ ವಿಕೆಟ್ ಬೆನ್ನಲ್ಲೇ, ಅರ್ಧಶತಕ ಗಳಿಸಿದ್ದ ಸೌದ್ ಶಕೀಲ್ (52) ಸಹ ಔಟ್ ಆದರು. ಮೊಹಮ್ಮದ್ ನವಾಜ್ ಕೊನೆಯಲ್ಲಿ ಇನ್ನಿಂಗ್ಸ್ ಕಟ್ಟಲಿಲ್ಲ. ಬಾಲಂಗೋಚಿಗಳು ಕ್ರಿಸ್ಗೆ ಬಂದು ಪೆವಿಲಿಯನ್ಗೆ ಮರಳಿದರು. ಇದರಿಂದ 46.3 ಓವರ್ಗೆ ಪಾಕಿಸ್ತಾನ ಆಲ್ಔಟ್ ಆಯಿತು.
ಚೆನ್ನೈನ ಸ್ಪಿನ್ ಪಿಚ್ ಸಲುವಾಗಿ ತಂಡಕ್ಕೆ ಸೇರ್ಪಡೆಯಾದ ತಬ್ರೈಜ್ ಶಮ್ಸಿ ಬೆಸ್ಟ್ ಸ್ಪೆಲ್ ಮಾಡಿದರು. ಪಾಕ್ನ ಪ್ರಮುಖ ನಾಲ್ಕು ವಿಕೆಟ್ ಶಮ್ಸಿ ಪಾಲಾದರೆ, ಮಾರ್ಕೊ ಜಾನ್ಸೆನ್ 3, ಮಾರ್ಕೊ ಜಾನ್ಸೆನ್ 2 ಮತ್ತು ಲುಂಗಿ ಎನ್ಗಿಡಿ 1 ವಿಕೆಟ್ ಪಡೆದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಭಾರತ?