ಕರಾಚಿ (ಪಾಕಿಸ್ತಾನ):ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲಿನ ಬೆನ್ನಲ್ಲೇ ಭಾರೀ ಟೀಕೆಗೆ ಗುರಿಯಾಗಿರುವ ಪಾಕ್ ತಂಡದಲ್ಲಿ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಕ್ ನಾಯಕ ಬಾಬರ್ ಅಜಂ ಬ್ಯಾಟಿಂಗ್ ಹಾಗೂ ನಾಯಕತ್ವ ನಿರ್ವಹಣೆಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವುದು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವಿಶ್ವಕಪ್ ಬಳಿಕ ನಾಯಕನ ಬದಲಾವಣೆಗೆ ಸಾಧ್ಯತೆ ಇದ್ದು, ಸರ್ಫರಾಜ್ ಅಹ್ಮದ್, ಮುಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಅಫ್ರಿದಿ ಅವರು ಭವಿಷ್ಯದ ಮುಂದಾಳು ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳೆಂಬ ಚರ್ಚೆ ನಡೆದಿದೆ.
ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಪ್ರವಾಸ ತೆರಳಲಿದೆ. ನಂತರದ ಮಹತ್ವದ ಟೂರ್ನಿಯಾದ 2024ರ ಟಿ20 ವಿಶ್ವಕಪ್ ಮತ್ತು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆ ತಂಡದ ಹಿತದೃಷ್ಟಿಯಿಂದ ಈ ನಡೆಗೆ ಮುಂದಾಗಲಾಗಿದೆ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಈ ಬಗ್ಗೆ ಸ್ಪಷ್ಟ ಒಮ್ಮತ ಮೂಡಿದ್ದು, ತಮ್ಮನ್ನು ತಾವು ಸಾಬೀತುಪಡಿಸುವ ಅವಕಾಶ ಹೊಂದಿದ್ದ ಬಾಬರ್, ಅದರಂತೆ ಆಡುವಲ್ಲಿ ವಿಫಲರಾಗಿದ್ದಾರೆ. ಸೋಮವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೂ ಸೇರಿದಂತೆ ಕೊನೆಯ ಮೂರು ಹಣಾಹಣಿಗಳಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನಕ್ಕೆ ಟೂರ್ನಿಯಲ್ಲಿ ಇನ್ನೂ ನಾಲ್ಕು ಲೀಗ್ ಪಂದ್ಯಗಳಿದ್ದು, ಗೆದ್ದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.
"ಪಾಕಿಸ್ತಾನವು ಪವಾಡಸದೃಶ ಪ್ರದರ್ಶನ ತೋರಿ ಮುಂಬರುವ ಎಲ್ಲ ಪಂದ್ಯಗಳನ್ನು ಗೆದ್ದರೆ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಬಹುದು. ಜೊತೆಗೆ ಬಾಬರ್ ನಾಯಕನಾಗಿ ಉಳಿಯುವ ಅವಕಾಶವನ್ನು ಇರಲಿದೆ. ಅಲ್ಲದೆ, ಕೇವಲ ರೆಡ್ ಬಾಲ್ ಸ್ವರೂಪದ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳಿರಬಹುದು'' ಎಂದು ಒಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಜೊತೆಗೆ, ಬಾಬರ್ ನಾಯಕನ ಸ್ಥಾನದ ಮೇಲೆ ಈಗಾಗಲೇ ತೂಗುಗತ್ತಿ ಇದ್ದು, ಒಂದು ವೇಳೆ ವಿಶ್ವಕಪ್ ಸೆಮಿಫೈನಲ್ ಅರ್ಹತೆ ಪಡೆಯದಿದ್ದರೆ, ತಂಡವು ಸ್ವದೇಶಕ್ಕೆ ಮರಳಿದ ಬೆನ್ನಲ್ಲೇ ಅವರು ನಾಯಕನ ಸ್ಥಾನಕ್ಕೆ ರಾಜೀನಾಮೆ ಘೋಷಿಸಬಹುದು ಎಂದು ಮೂಲಗಳು ಹೇಳಿವೆ.
ಬಾಬರ್‌ಗೆ ಫುಲ್ ಪವರ್:ಈಗಾಗಲೇ ನಾಯಕ ಬಾಬರ್‌ಗೆ ಸಾಕಷ್ಟು ಅಧಿಕಾರ ನೀಡಲಾಗಿದ್ದು, ಮುಖ್ಯವಾಗಿ ತಂಡದಲ್ಲಿ ತಮಗಿಷ್ಟದ ಆಟಗಾರನ ಆಯ್ಕೆಯನ್ನು ಅವರೇ ನಿರ್ಧರಿಸುತ್ತಿದ್ದರು. ಅವರ ಈ ಅಧಿಕಾರಕ್ಕೆ ಕಡಿವಾಣ ಹಾಕಲು ಯಾವುದೇ ಪ್ರಯತ್ನವನ್ನೂ ನಡೆಸಿರಲಿಲ್ಲ. ಆದರೆ ಇತ್ತೀಚೆಗಿನ ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಸೋಲುಗಳಿಗೆ ಬಾಬರ್ ಅವರೇ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ನಾಯಕರಾದ ಮಿಸ್ಬಾ ಉಲ್ ಹಕ್ ಮತ್ತು ಮುಹಮ್ಮದ್ ಹಫೀಜ್ ಅವರ ಸಲಹೆಗಳ ನಡುವೆಯೂ ಕೂಡ ಬಾಬರ್ ಕೇಳಿದ ಎಲ್ಲ 18 ಆಟಗಾರನ್ನು ಆಯ್ಕೆ ಮಾಡಲಾಗಿತ್ತು. ಅಲ್ಲದೇ, ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಕೂಡ ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದರು.
ಇತರ ಮಾಜಿ ಆಟಗಾರರ ಸಲಹೆ ನಿರ್ಲಕ್ಷಿಸಿದ್ದ ಪಿಸಿಬಿ:ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ಮಿಸ್ಬಾ ಮತ್ತು ಹಫೀಜ್ ಮತ್ತು ಇತರ ಕೆಲವು ಮಾಜಿ ಆಟಗಾರರ ಸಲಹೆಯನ್ನು ನಿರ್ಲಕ್ಷಿಸಿದ್ದರು. ವಿಶ್ವಕಪ್ ತಂಡದಲ್ಲಿ ಬಾಬರ್ ಬದಲಾವಣೆ ಮಾಡಲು ಇಚ್ಚಿಸುವುದಿಲ್ಲ ಎಂದು ಅಶ್ರಫ್ ಹೇಳಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.