ಕರ್ನಾಟಕ

karnataka

ETV Bharat / sports

ಪಿಚ್ ಬದಲಾವಣೆ ವರದಿ: ಭಾರತದ ವಿರುದ್ಧ ಆಧಾರರಹಿತ, ಅಸಂಬದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ- ಚಾಟಿ ಬೀಸಿದ ಸುನಿಲ್ ಗವಾಸ್ಕರ್

Sunil Gavaskar on pitch controversy: ''ಪಿಚ್ ಬದಲಾವಣೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಇದು ಅಸಂಬದ್ಧ'' ಎಂದು ಪಿಚ್ ವಿವಾದದ ಹಿನ್ನೆಲೆಯಲ್ಲಿ ವಿಶ್ವ ಕ್ರಿಕೆಟ್​ ದಂತಕಥೆ ಸುನಿಲ್ ಗವಾಸ್ಕರ್ ಚಾಟಿ ಬೀಸಿದ್ದಾರೆ. ನಿನ್ನೆ ಭಾರತ-ನ್ಯೂಜಿಲೆಂಡ್ ಪಂದ್ಯದ ನಂತರ ವಿಶ್ಲೇಷಣೆಯ ಸಂದರ್ಭದಲ್ಲಿ ಅವರು ಗರಂ ಆದರು.

Gavaskar on pitch controversy
ಸುನಿಲ್ ಗವಾಸ್ಕರ್

By PTI

Published : Nov 16, 2023, 7:59 AM IST

Updated : Nov 16, 2023, 8:06 AM IST

ಮುಂಬೈ(ಮಹಾರಾಷ್ಟ್ರ):ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್​ ಪಂದ್ಯ ನಡೆದ ಪಿಚ್‌ ಕುರಿತು ಸೃಷ್ಟಿಸಲಾಗಿದ್ದ ವಿವಾದದ ಬಗ್ಗೆ ಕ್ರಿಕೆಟ್​ ದಂತಕಥೆ ಸುನಿಲ್ ಗವಾಸ್ಕರ್ ಗರಂ ಆದರು. "ಮೂರ್ಖರು" ಆತಿಥೇಯರ ಮೇಲೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಕಿಡಿಕಾರಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಭಾರತ 70 ರನ್​ಗಳ ಅಂತರದಿಂದ ವಿಜಯ ಸಾಧಿಸಿ ಟೂರ್ನಿಯಲ್ಲಿ ಫೈನಲ್ ತಲುಪಿತು. ವಾಂಖೆಡೆಯಲ್ಲಿ ಭಾರತದ ಅತ್ಯಂತ ನಿರೀಕ್ಷಿತ ಸೆಮಿ ಫೈನಲ್‌ ಪಂದ್ಯಕ್ಕೂ ಮುನ್ನ, ಬಿಸಿಸಿಐ ಆಟಕ್ಕೆ "ಸ್ಲೋ ಪಿಚ್" ಹುಡುಕಿದೆ ಎಂಬ ವರದಿಗಳನ್ನು ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿದ್ದವು.

ಬಿಸಿಸಿಐ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಿಕೊಂಡಿದೆ ಎಂಬುದು ಇದರ ಹಿಂದಿನ ಕುತರ್ಕವಾಗಿತ್ತು. ಆದರೆ, ಬಿಸಿಸಿಐ ಈ ರೀತಿಯ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿದೆ. ಟೂರ್ನಿಯ ನಾಕೌಟ್ ಪಂದ್ಯಗಳ ಪಿಚ್ ಅನ್ನು ಐಸಿಸಿ ಕ್ಯುರೇಟರ್ ಸಿದ್ಧಪಡಿಸಿದ್ದಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

"ಐಸಿಸಿಯ ಸ್ವತಂತ್ರ ಪಿಚ್ ಸಲಹೆಗಾರರು ತಮ್ಮ ಉದ್ದೇಶಿತ ಪಿಚ್ ಹಂಚಿಕೆಗಳಲ್ಲಿ ಆತಿಥೇಯರು ಹಾಗೂ ಸ್ಥಳಗಳೊಂದಿಗೆ ಕೆಲಸ ಮಾಡುತ್ತಾರೆ. ಈ ಪ್ರಕ್ರಿಯೆಯು ವಿಶ್ವಕಪ್​ ಪಂದ್ಯಾವಳಿಯ ಉದ್ದಕ್ಕೂ ಮುಂದುವರಿಯುತ್ತದೆ" ಎಂದು ಬಿಸಿಸಿಐ ವಕ್ತಾರರು ಆಂಗ್ಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ''ಐಸಿಸಿ ಪಂದ್ಯಾವಳಿಗಳಲ್ಲಿನ ಪಿಚ್‌ಗಳನ್ನು ಐಸಿಸಿ ಸಲಹೆಗಾರ ಆ್ಯಂಡಿ ಅಟ್ಕಿನ್ಸನ್ ಅವರ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಲಾಗುತ್ತದೆ. ಆತಿಥೇಯ ಕ್ರಿಕೆಟ್ ಮಂಡಳಿಯು ಸಿದ್ಧಪಡಿಸಿದ ಪಿಚ್ ಆಧರಿಸಿ ಯಾವ ಪಿಚ್ ಅನ್ನು ಬಳಸಬೇಕು ಎನ್ನುವುದನ್ನು ಪಿಚ್ ಸಲಹೆಗಾರರೇ ನಿರ್ಧಾರ ಮಾಡುತ್ತಾರೆ'' ಎಂದು ತಿಳಿಸಿದ್ದರು.

ನಿನ್ನೆಯ ಮ್ಯಾಚ್​ನಲ್ಲಿ ಕುತೂಹಲಕಾರಿಯಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿ ಏಳು ವಿಕೆಟ್​ಗಳ ಐತಿಹಾಸಿಕ ಪಡೆದು ಸಾಧನೆ ಮಾಡಿದರು. ಭಾರತವು ನ್ಯೂಜಿಲೆಂಡ್ ಅನ್ನು 48.1 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟ್ ಮಾಡಿ 12 ವರ್ಷಗಳ ನಂತರ ತಮ್ಮ ಮೊದಲ ವಿಶ್ವಕಪ್ ಫೈನಲ್ ತಲುಪಿತು.

ಗವಾಸ್ಕರ್​ ಗರಂ:"ಪಿಚ್ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಎಲ್ಲಾ ಮೂರ್ಖರು ಸುಮ್ಮನಾಗಬೇಕು. ಭಾರತದ ಮೇಲೆ ಇಲ್ಲದೇ ಇರುವ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ. ಈ ವಿಷಯ ಎರಡೂ ತಂಡಗಳಿಗೆ ಅನ್ವಯಿಸುತ್ತದೆ" ಎಂದು ಗವಾಸ್ಕರ್ ಪಂದ್ಯದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಅಹಮದಾಬಾದ್‌ನಲ್ಲಿ ಭಾರತ ಫೈನಲ್‌ಗೆ ಬಂದರೆ, ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಧಾನಗತಿಯ ಪಿಚ್ ನಿರೀಕ್ಷಿಸಲಾಗಿದೆ ಎಂದು ವರದಿಯೊಂದು ಹೇಳಿದೆ. ''ಮೊದಲು ಪಿಚ್ ಬದಲಾವಣೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಇದು ಅಸಂಬದ್ಧವಾಗಿದೆ'' ಎಂದು ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವತಂತ್ರ ಪಿಚ್ ಸಲಹೆಗಾರ ಆ್ಯಂಡಿ ಅಟ್ಕಿನ್ಸನ್ ಅವರನ್ನು ಪಿಚ್​ ಬದಲಾವಣೆಯ ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸ್ಪಷ್ಟಪಡಿಸಿದೆ.

ಆಂಗ್ಲ ಮಾಧ್ಯಮಗಳ ವರದಿಯ ಪ್ರಕಾರ, ಸೆಮಿಫೈನಲ್ ಪಂದ್ಯಗಳು ನಡೆಯುವ ಪಿಚ್ ಪ್ರಾರಂಭದಲ್ಲಿ ಆಯ್ಕೆ ಮಾಡಿದ ಪಿಚ್ ಅಲ್ಲ. ನಾಕೌಟ್ ಪಂದ್ಯಕ್ಕೆ ಪಿಚ್ ಸಂಖ್ಯೆ 7 ಅನ್ನು ಬಳಕೆ ಮಾಡಬೇಕಾಗಿತ್ತು. ಅದು ತಾಜಾ ಪಿಚ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಪಿಚ್ ಸಂಖ್ಯೆ 6ನ್ನು ಸೆಮಿಫೈನಲ್‌ನಲ್ಲಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿತ್ತು. ಇದೇ ಪಿಚ್‌ನಲ್ಲಿ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಹಾಗೂ ಭಾರತ vs ಶ್ರೀಲಂಕಾ ಪಂದ್ಯಗಳು ನಡೆದಿವೆ.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ನ್ಯೂಜಿಲೆಂಡ್​ ಮಣಿಸಿ ಫೈನಲ್​ಗೇರಿದ ಭಾರತ; ಸಪ್ತ ವಿಕೆಟ್​ ಪಡೆದು ಮಿಂಚಿದ ಶಮಿ

Last Updated : Nov 16, 2023, 8:06 AM IST

ABOUT THE AUTHOR

...view details