ಧರ್ಮಶಾಲಾ (ಹಿಮಾಚಲ ಪ್ರದೇಶ): ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅದ್ಭುತ ಕ್ಯಾಚ್ ಕಾರಣಕ್ಕೆ ಪಂದ್ಯದ ನಂತರ 'ಉತ್ತಮ ಫೀಲ್ಡರ್' ಪದಕವನ್ನು ಫಿಲ್ಡಿಂಗ್ ಕೋಚ್ ಅವರು ಜಡೇಜಾಗೆ ನೀಡಿ ಗೌರವಿಸಿದ್ದರು. ಆದರೆ ಭಾನುವಾರ ಸ್ಕ್ವೇರ್ ಲೆಗ್ ಜಾಗದಲ್ಲಿ ನಿಂತಿದ್ದ ಜಡೇಜಾ, ನ್ಯೂಜಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಅವರ ಕ್ಯಾಚ್ ಕೈ ಚೆಲ್ಲಿದರು. ಇದು ತಂಡಕ್ಕೆ ದುಬಾರಿ ಆಗುತ್ತಾ? ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.
ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ತಂಡ ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿತು. ಪವರ್ ಪ್ಲೇ ಅಂತ್ಯಕ್ಕೆ 34 ರನ್ಗಳಿಗೆ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು. ಸಿರಾಜ್ ಎಂದಿನಂತೆ ಪವರ್‌ಪ್ಲೇನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡ ಮೊಹಮ್ಮದ್ ಶಮಿ ಸಹ ವಿಕೆಟ್ ಉರುಳಿಸಿದ್ದಾರೆ.
ಕ್ಯಾಚ್ ಕೈ ಚೆಲ್ಲಿದ ಜಡೇಜಾ: ಮೊಹಮ್ಮದ್ ಶಮಿ ಅವರ 11ನೇ ಓವರ್ನಲ್ಲಿ ಆಗ ತಾನೇ ಕ್ರೀಸ್ಗೆ ಬಂದು ಇನ್ನೂ ಸೆಟ್ಲ್ ಆಗಿರದ ರಚಿನ್ ರವೀಂದ್ರ ಸ್ಕ್ವೇರ್ ಲೆಗ್ ವಿಭಾಗದಲ್ಲಿ ಜಾಗ ಮಾಡಿಕೊಂಡು ಬೌಂಡರಿ ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗಾಳಿಯಲ್ಲಿ ಜಡೇಜಾ ನಿಂತಿದ್ದ ಜಾಗಕ್ಕೆ ಹೋಗಿತ್ತು. ಆದರೆ ಕೈಗೆ ಬಂದ ಚೆಂಡು ಹಿಡಿಯುವಲ್ಲಿ ಜಡ್ಡು ವಿಫಲರಾದರು. ಈ ಕ್ಯಾಚ್ ಹಿಡಿದಿದ್ದಲ್ಲಿ 12 ರನ್ ಗಳಿಸಿದ್ದ ರಚಿನ್ ಪೆವಿಲಿಯನ್ಗೆ ಮರಳುತ್ತಿದ್ದರು. ಆದರೆ, ಇದೇ ಜೀವದಾನ ಬಳಸಿಕೊಂಡ ಅವರು 87 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 75 ರನ್ ಕಲೆಹಾಕಿದರು.