ಅಹಮದಾಬಾದ್ (ಗುಜರಾತ್):ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲೆಸ್ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಇನ್ನು ಕೆಲ ಹೊತ್ತಿನಲ್ಲಿ ಮೋದಿ ಮತ್ತು ಮಾರ್ಲೆಸ್ ಕ್ರೀಡಾಂಗಣವನ್ನು ತಲುಪುವ ನಿರೀಕ್ಷೆಯಿದೆ.
ಇಂದು ಬೆಳಗ್ಗೆ ಪ್ರಧಾನಿ ಮೋದಿ ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸಂಜೆ ಅಹಮದಾಬಾದ್‌ಗೆ ಅವರು ಆಗಮಿಸಿದರು. ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ್ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್.ಪಾಟೀಲ್ ಇದ್ದರು. ಮೋದಿ ಬಂದ ಸ್ವಲ್ಪ ಸಮಯದ ನಂತರ ಆಸ್ಟ್ರೇಲಿಯಾದ ಉಪ ಪ್ರಧಾನಿ ಮಾರ್ಲೆಸ್ ಕೂಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮಾರ್ಲೆಸ್ ಅವರನ್ನು ಸಿಎಂ ಪಟೇಲ್ ಸ್ವಾಗತಿಸಿದರು.
ಫೈನಲ್ ಪಂದ್ಯ ವೀಕ್ಷಿಸಿದ ಖರ್ಗೆ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದೆ. ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 241 ರನ್‌ಗಳ ಟಾರ್ಗೆಟ್ ನೀಡಿದೆ. ಭಾರತ ಇನ್ನಿಂಗ್ಸ್ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೀಕ್ಷಿಸಿದರು. ಇವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಇತರ ನಾಯಕರು ಸಹ ವೀಕ್ಷಣೆ ಮಾಡಿದರು. ಅಲ್ಲದೇ, ರಾಯಪುರದಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಸಹ ಫೈನಲ್ ಪಂದ್ಯವನ್ನು ವೀಕ್ಷಿಸಿದರು.