ಹೈದರಾಬಾದ್:ಏಕದಿನವಿಶ್ವಕಪ್ (ODI World Cup) ಸರಣಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಳಪೆ ಪಾರ್ಮ್ನಿಂದಾಗಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬಾಬರ್ ಅಜಮ್ ನೇತೃತ್ವದ ಪಾಕ್ಗೆ ಗೆಲುವು ಅನಿವಾರ್ಯವಾಗಿದೆ. ಮತ್ತೊಂದೆಡೆ ದೆಹಲಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಆಫ್ಘಾನ್, ನ್ಯೂಜಿಲೆಂಡ್ ವಿರುದ್ದ ಸೋಲು ಕಂಡಿದ್ದು ಗೆಲುವಿನ ಹಾದಿಗೆ ಮರಳಲು ಯೋಜನೆ ರೂಪಿಸಿದೆ.
ಪಿಚ್ ವರದಿ:ಉಭಯ ತಂಡಗಳ ನಡುವಿನ ಇಂದಿನ ಪಂದ್ಯ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ನಿಧಾನಗತಿಯ ಆಟಕ್ಕೆ ಹೆಸರುವಾಸಿಯಾಗಿರುವ ಈ ಪಿಚ್ನಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯ ಎದ್ದುಕಾಣುತ್ತದೆ. ವೇಗದ ಬೌಲರ್‌ಗಳಿಗು ಕೂಡ ಉತ್ತಮ ಬೌಲಿಂಗ್ಗೆ ಸಹಕಾರಿಯಾಗಲಿದೆ.
ಹೆಡ್ ಟೂ ಹೆಡ್:ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದುವರೆಗೆ ಏಕದಿನ ಪಂದ್ಯಗಳಲ್ಲಿ ಏಳು ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಏಳು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದೆ. ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಅದರಲ್ಲೂ ಪಾಕಿಸ್ತಾನ ಮೇಲುಗೈ ಸಾಧಿಸಿದೆ.
ಕ್ರೀಡಾಂಗಣ ವರದಿ:ಎಂ ಚಿದಂಬರಂ ಮೈದಾನದಲ್ಲಿಈವರೆಗೂ ಒಟ್ಟು 37 ಏಕದಿನ ಪಂದ್ಯಗಳು ನಡೆದಿವೆ. ಈ ಪೈಕಿ 18ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಹಾಗೂ 18ರಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿವೆ. ಈ ಪಿಚ್‌ನ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 226 ಆಗಿದ್ದರೆ ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 204 ಆಗಿದೆ.