ನವದೆಹಲಿ:ಹಿಟ್ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಅರುಣ್ ಜೇಟ್ಲಿ ಮೈದಾನದಲ್ಲಿಂದು ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಶ್ವಕಪ್ ಫೇವರೆಟ್ ತಂಡ ಯಾಕೆ ಎಂಬುದನ್ನು ಸಾಬೀತುಪಡಿಸಿತು. ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ 2 ನೇ ಸ್ಥಾನ ಪಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 272 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್ಗಳಲ್ಲಿ 2 ವಿಕೆಟ್ಗೆ 272 ರನ್ ಗಳಿಸಿತು.
'ಪವರ್'ಫುಲ್ ಪ್ಲೇ:ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಇಬ್ಬರೂ ಆಟಗಾರರು ಅಫ್ಘನ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಮೊದಲ ಹತ್ತು ಓವರ್ಗಳ ಪವರ್ಪ್ಲೇನಲ್ಲಿ 94 ರನ್ ಕಲೆ ಹಾಕಿ ಬ್ಯಾಟಿಂಗ್ ತಾಕತ್ತು ತೋರಿಸಿದರು.
ಸಿಕ್ಸರ್, ಬೌಂಡರಿಗಳನ್ನು ಸಿಡಿಸಿದ ರೋಹಿತ್ ಶರ್ಮಾ 2019 ರ ವಿಶ್ವಕಪ್ ಆಟದ ಸೊಬಗು ಮರುಕಳಿಸುವಂತೆ ಮಾಡಿದರು. ರೋಹಿತ್ ಬ್ಯಾಟ್ ಎಷ್ಟು ಸದ್ದು ಮಾಡುತ್ತಿತ್ತೆಂದರೆ, ಒಂದು ಹಂತದಲ್ಲಿ ಕಿಶನ್ 17 ರನ್ ಮಾಡಿದ್ದರೆ, ರೋಹಿತ್ 75 ರನ್ ಚಚ್ಚಿದ್ದರು. ಅರ್ಧಶತಕದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ಶರ್ಮಾ 84 ಎಸೆತಗಳಲ್ಲಿ 131 ರನ್ ಗಳಿಸಿದರು. ಇದು ವಿಶ್ವಕಪ್ನಲ್ಲಿ ದಾಖಲಾದ 7 ನೇ ಶತಕವಾಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್(6)ದಾಖಲೆಯನ್ನು ರೋಹಿತ್ ಮುರಿದರು.