ಬೆಂಗಳೂರು:ವಿಶ್ವಕಪ್ ಫೇವರೆಟ್ ತಂಡಗಳಲ್ಲಿ ಒಂದಾದ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಈ ಬಾರಿಯ ಟೂರ್ನಿ ಅದ್ಯಾಕೋ ಒಗ್ಗಿಲ್ಲ. ಏಕದಿನ ವಿಶ್ವಕಪ್ಗೆ ಅರ್ಹತಾ ಪಂದ್ಯಗಳನ್ನು ಆಡಿದ ತಂಡಗಳ ಎದುರು ಸೋಲು ಕಾಣುತ್ತಿದೆ. ಮೊದಲು ಅಫ್ಘಾನಿಸ್ತಾನ ವಿರುದ್ಧ ಸೋತಿದ್ದರೆ, ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಂಡಿಯೂರಿದೆ.
ಬ್ಯಾಟಿಂಗ್ ಸ್ವರ್ಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬ್ಯಾಟರ್ಗಳ ವೈಫಲ್ಯದಿಂದ 33.2 ಓವರ್‌ಗಳಲ್ಲಿ 156 ರನ್ಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನತ್ತಿದ ಲಂಕಾ ಪಡೆ 25.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ, ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿತು. ಆಂಗ್ಲಪಡೆ ಸತತ ಮೂರು ಪಂದ್ಯಗಳಲ್ಲಿ ಸೋತು ಸೆಮೀಸ್ನಿಂದ ಮತ್ತಷ್ಟು ದೂರವಾಯಿತು.
ಗೆಲುವು ತಂದುಕೊಟ್ಟ ಅರ್ಧಶತಕಗಳ ಜೋಡಿ:ಸಾಧಾರಣ ಗುರಿ ಬೆನ್ನಟ್ಟಿದ ಲಂಕಾದ ಮೇಲೆ ಒತ್ತಡ ಹೇರಲು ಇಂಗ್ಲೆಂಡ್ ಪ್ರಯತ್ನಿಸಿತು. ಕುಸಾಲ್ ಪೆರಾರ 4, ನಾಯಕ ಕುಸಾಲ್ ಮೆಂಡಿಸ್ 11 ರನ್ಗೆ ವಿಕೆಟ್ ನೀಡಿದರು. 23 ರನ್ಗೆ 2 ವಿಕೆಟ್ ಬಿದ್ದಿದ್ದರಿಂದ ಲಂಕಾ ನಿಧಾನಗತಿ ಬ್ಯಾಟಿಂಗ್ ಮೊರೆ ಹೋಯಿತು. ಪಥುಮ್ ನಿಸ್ಸಂಕಾ (77) ಮತ್ತು ಸದೀರ ಸಮರವಿಕ್ರಮ(65) ಅರ್ಧಶತಕ ಬಾರಿಸುವ ಮೂಲಕ ಗೆಲುವು ಸಲೀಸಾಗುವಂತೆ ಮಾಡಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ಠುಸ್ಸಾದ ಇಂಗ್ಲೆಂಡ್ ಬ್ಯಾಟಿಂಗ್:ಇಂಗ್ಲೆಂಡ್ ತಂಡದ ಬಲವೇ ಬ್ಯಾಟಿಂಗ್. 9ನೇ ಕ್ರಮಾಂಕದವರೆಗೂ ಬ್ಯಾಟ್ ಬೀಸಬಲ್ಲ ಆಟಗಾರರಿದ್ದಾರೆ. ಆದರೆ, ಇದೆಲ್ಲಾ ಲೆಕ್ಕಾಚಾರ ವಿಶ್ವಕಪ್ನಲ್ಲಿ ಬುಡಮೇಲಾಗಿದೆ. ಆರಂಭಿಕರಾದ ಬೈರ್ಸ್ಟೋವ್ 30, ಡೇವಿಡ್ ಮಲಾನ್ 28, ಬೆನ್ ಸ್ಟೋಕ್ಸ್ 43 ಗಳಿಸಿದ್ದು ಬಿಟ್ಟರೆ ಯಾರೊಬ್ಬರೂ ಮೈದಾನದಲ್ಲಿ ನೆಲೆಯೂರಲಿಲ್ಲ. ಅಷ್ಟೇನೂ ಪ್ರಭಾವಿ ಅಲ್ಲದ ಬೌಲಿಂಗ್ ಪಡೆಯಾಗಿರುವ ಲಂಕಾಗೆ ಸತತ ವಿಕೆಟ್ ನೀಡಿ 156 ರನ್ಗೆ ಆಲೌಟ್ ಆದರು. ಅದೂ 33.2 ಓವರ್‌ಗಳಲ್ಲಿ. ಈ ದಶಕದ ಅದ್ಭುತ ಬ್ಯಾಟರ್ಗಳಲ್ಲಿ ಒಬ್ಬರಾದ ಜೋ ರೂಟ್, ನಾಯಕ ಜಾಸ್ ಬಟ್ಲರ್, ಹೊಡೊಬಡಿ ಆಟಗಾರ ಲಿವಿಂಗ್ಸ್ಟೋನ್, ಮೊಯೀನ್ ಅಲಿ ಬ್ಯಾಟ್ ಸದ್ದು ಮಾಡಲಿಲ್ಲ.