ಕರ್ನಾಟಕ

karnataka

ETV Bharat / sports

ಡಚ್ಚರಿಗೆ ಡಿಚ್ಚಿ ನೀಡಿದ ಆಂಗ್ಲ ಪಡೆ: 160 ರನ್ನಿಂದ ಗೆದ್ದು ಚಾಂಪಿಯನ್​ ಟ್ರೋಫಿ ಅರ್ಹತೆಯತ್ತ ಇಂಗ್ಲೆಂಡ್​ ತಂಡ - England win on Netherland

ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಏರಿಕೆ ಕಂಡಿತು. ಡಚ್ಚರು ಸೋಲುವ ಮೂಲಕ ಕೊನೆ ಸ್ಥಾನಕ್ಕೆ ಕುಸಿದರು.

ಡಚ್ಚರಿಗೆ ಡಿಚ್ಚಿ ನೀಡಿದ ಆಂಗ್ಲ ಪಡೆ
ಡಚ್ಚರಿಗೆ ಡಿಚ್ಚಿ ನೀಡಿದ ಆಂಗ್ಲ ಪಡೆ

By ETV Bharat Karnataka Team

Published : Nov 8, 2023, 10:22 PM IST

ಪುಣೆ (ಮಹಾರಾಷ್ಟ್ರ): ವಿಶ್ವಕಪ್​ನಲ್ಲಿ ಸತತ ಸೋಲಿನಿಂದಾಗಿ ಹೊರಬಿದ್ದಿರುವ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಕೊನೆಗೂ ಕ್ರಿಕೆಟ್​ ಶಿಶು ನೆದರ್ಲೆಂಡ್​ ವಿರುದ್ಧ 160 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಪ್ರಗತಿ ಸಾಧಿಸಿ, ಚಾಂಪಿಯನ್​ ಟ್ರೋಫಿಯಲ್ಲಿ ಸ್ಥಾನ ಪಡೆಯುವ ಭರವಸೆ ಉಳಿಸಿಕೊಂಡಿದೆ.

ಮೊದಲು ಬ್ಯಾಟ್​ ಮಾಡಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ ಬೆನ್​ ಸ್ಟೋಕ್ಸ್​ ಶತಕ, ಡೇವಿಡ್​ ಮಲಾನ್​, ಬೌಲರ್​ ಕ್ರಿಸ್​ ವೋಕ್ಸ್​ರ ಅರ್ಧಶತಕದ ನೆರವಿನಿಂದ 9 ವಿಕೆಟ್​ಗೆ 339 ರನ್​ ಪೇರಿಸಿತು. ಇದಕ್ಕುತ್ತರವಾಗಿ ಡಚ್ಚರು 37.2 ಓವರ್​ಗಳಲ್ಲಿ 179 ರನ್​ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಿಂದ ಅಧಿಕೃತವಾಗಿ ಗೇಟ್​ ಪಾಸ್​ ಪಡೆಯಿತು. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದಿದ್ದ ಡಚ್​ ಪಡೆ ಇಂಗ್ಲೆಂಡ್​ ಸೋಲಿಸುವ ಗುರಿ ಈಡೇರಲಿಲ್ಲ.

ವಿಶ್ವಕಪ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನೆದರ್ಲೆಂಡ್​ ತಂಡ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು. ತಂಡದಲ್ಲಿನ ಆಲ್​ರೌಂಡರ್​ಗಳು ಮತ್ತು ಉತ್ತಮ ಫೀಲ್ಡಿಂಗ್​ ಪ್ರದರ್ಶಿಸಿ ಪ್ರತಿ ಪಂದ್ಯದಲ್ಲಿ ರೋಚಕತೆ ಮೂಡಿಸುತ್ತಿದ್ದ ಡಚ್ಚರು ಇಂಗ್ಲೆಂಡ್​ ಎದುರು ಯಾವುದೇ ಪ್ರತಿರೋಧ ಒಡ್ಡಲಿಲ್ಲ. ವೆಸ್ಲೆ ಬರ್ರೆಸ್ಸಿ 37, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33, ನಾಯಕ ಸ್ಕಾಟ್​ ಎಡ್ವರ್ಡ್​ 38, ತೇಜ ನಿಡಮನೂರು 41 ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಸೊರಗಿದ್ದ ಇಂಗ್ಲೆಂಡ್​ ಬೌಲಿಂಗ್​ ವಿಭಾಗ ಡಚ್ಚರ ವಿರುದ್ಧ ಪುಟಿದೆದ್ದಿತು. ಆದಿಲ್​ ರಶೀದ್​​, ಮೊಯೀನ್​ ಅಲಿ ತಲಾ 3 ವಿಕೆಟ್​ ಪಡೆದರೆ, ಡೇವಿಡ್​ ವಿಲ್ಲೆ 2, ಕ್ರಿಸ್​ ವೋಕ್ಸ್​ 1 ವಿಕೆಟ್​ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಬೆನ್​ಸ್ಟೋಕ್ಸ್​ ಭರ್ಜರಿ ಶತಕ:ನಿವೃತ್ತಿ ವಾಪಸ್​ ಪಡೆದು ವಿಶ್ವಕಪ್​ನಲ್ಲಿ ಆಡುತ್ತಿರುವ ಆಲ್​​ರೌಂಡರ್​ ಬೆನ್​ ಸ್ಟೋಕ್ಸ್​, ಅದ್ಭುತ ಇನಿಂಗ್ಸ್​ ಕಟ್ಟಿದರು. ಡೇವಿಡ್​ ಮಲಾನ್​ (87) ಔಟಾದ ಬಳಿಕ ಮತ್ತೆ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ ತಂಡವನ್ನು ಆಧರಿಸಿದರು. ಹ್ಯಾರಿ ಬ್ರೂಕ್ (11), ಜೋಸ್ ಬಟ್ಲರ್ (5) ಮತ್ತು ಮೊಯಿನ್ ಅಲಿ (4) ವಿಕೆಟ್​ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದರೆ, ಆಲ್​ರೌಂಡರ್ ಕ್ರಿಸ್ ವೋಕ್ಸ್ ಜೊತೆಗೂಡಿ 7ನೇ ವಿಕೆಟ್​ಗೆ ​129 ರನ್​ಗಳ ಪಾಲುದಾರಿಕೆ ನೀಡಿದರು. ಸ್ಟೋಕ್ಸ್​ 84 ಎಸೆತಗಳಲ್ಲಿ ತಲಾ 6 ಬೌಂಡರಿ, ಸಿಕ್ಸರ್​ಗಳ ಸಮೇತ 108 ರನ್​ ಕಲೆಹಾಕಿ ಔಟಾದರು. ಇನ್ನೊಂದು ಬದಿಯಲ್ಲಿ ಕ್ರಿಸ್ ವೋಕ್ಸ್ (51) ಅರ್ಧಶತಕವನ್ನು ಬಾರಿಸಿದರು.

ಚಾಂಪಿಯನ್​ ಟ್ರೋಫಿಗೆ ಅರ್ಹತೆ?:ವಿಶ್ವಕಪ್​ನಲ್ಲಿ ಮೊದಲ 8ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ 2025 ರ ಚಾಂಪಿಯನ್​ ಟ್ರೋಫಿಗೆ ನೇರ ಅರ್ಹತೆ ಸಿಗಲಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್​ ಪಾಯಿಂಟ್​ ಪಟ್ಟಿಯಲ್ಲಿ 7 ನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ನವೆಂಬರ್​ 11 ರಂದು ಪಾಕಿಸ್ತಾನದ ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಇಲ್ಲಿ ಗೆಲುವು ಸಾಧಿಸಿದಲ್ಲಿ 6 ಅಥವಾ 7 ನೇ ಸ್ಥಾನ ಪಡೆದು ನೇರವಾಗಿ ಅರ್ಹತೆ ಪಡೆಯಲಿದೆ. ಸೋತಲ್ಲಿ ಅರ್ಹತೆ ಕಳೆದುಕೊಳ್ಳಲಿದೆ.

ಇದನ್ನೂ ಓದಿ:"ಭಾರತ ವಿಶೇಷ ಬಾಲ್ ಬಳಸಿ ಆಡುತ್ತಿದೆ" - ಹೀಗೆ ಹೇಳಲು 'ನಾಚಿಕೆ ಆಗುವುದಿಲ್ಲವೇ' ಹಸನ್​ ರಾಝಾ ಎಂದು ಕೇಳಿದ ಶಮಿ

ABOUT THE AUTHOR

...view details