ಬೆಂಗಳೂರು:ರಚಿನ್ ರವೀಂದ್ರ ಶತಕ ಮತ್ತು ಕೇನ್ ವಿಲಿಯಮ್ಸನ್ ಅವರ ಬೃಹತ್ ಅರ್ಧಶತಕದ ನೆರವಿನಿಂದ ಕಿವೀಸ್ ತಂಡ ಪಾಕಿಸ್ತಾನದ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 402 ರನ್ಗಳ ಬೃಹತ್ ಮೊತ್ತವನ್ನು ನೀಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನಕ್ಕೆ ಕಿವೀಸ್ ಬ್ಯಾಟರ್ಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ನಿಗದಿತ ಓವರ್ ಅಂತ್ಯಕ್ಕೆ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದೆ.
ಬೆಂಗಳೂರಿನ ಬ್ಯಾಟಿಂಗ್ ಫೇವರಿಟ್ ಪಿಚ್ನಲ್ಲಿ ಪಾಕಿಸ್ತಾನದ ಬೌಲರ್ಗಳು ಕಿವೀಸ್ ಬ್ಯಾಟರ್ಗಳ ಮುಂದೆ ದಂಡನೆಗೆ ಒಳಗಾದರು. ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್ ಮತ್ತು ಹ್ಯಾರಿಸ್ ರೌಫ್ 10 ಓವರ್ಗೆ 80ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರು. ಎರಡನೇ ವಿಕೆಟ್ನ ಜೊತೆಯಾಟ ಮುರಿಯುವಷ್ಟರಲ್ಲಿ ಪಾಕ್ ತಂಡ ಭಾರಿ ನಷ್ಟಕ್ಕೆ ಒಳಗಾಗಿತ್ತು. ನಂತರ ಬಂದ ಬ್ಯಾಟರ್ಗಳು ಬಾಬರ್ ಪಡೆಯ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕಿವೀಸ್ಗೆ 68ರನ್ಗಳ ಮೊದಲ ವಿಕೆಟ್ ಜೊತೆಯಾಟದಿಂದ ಬಲ ಬಂದಿತು. ವಿಲಿಯಮ್ಸನ್ ತಂಡಕ್ಕೆ ಮರಳಿದ್ದರಿಂದ ಯಂಗ್ ಅವರನ್ನು ತಂಡದಿಂದ ಹೊರಗಿಟ್ಟು, ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೆ ಆರಂಭಿಕರಾಗಿ ಮೈದಾನಕ್ಕಿಳಿದಿದ್ದರು. 35 ರನ್ ಮಾಡಿ ಉತ್ತಮ ಆರಂಭ ನೀಡಿದ್ದ ಡೆವೊನ್ ಕಾನ್ವೆ ಹಸನ್ ಅಲಿ ಬೌಲ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವಿಕೆಟ್ನಿಂದ 68 ರನ್ಗಳ ಮೊದಲ ವಿಕೆಟ್ ಜೊತೆಯಾಟ ಬ್ರೇಕ್ ಆಯಿತು.
ಶತಕ ವಂಚಿತ ಕೇನ್:ನಂತರ ಎರಡನೇ ವಿಕೆಟ್ಗೆ ಒಂದಾದ ರಚಿನ್ ರವೀಂದ್ರ ಮತ್ತು ನಾಯಕ ಕೇನ್ ವಿಲಿಯಮ್ಸನ್ ಜತೆಯಾಟವನ್ನು ಮುಂದುವರೆಸಿದರಲ್ಲದೇ ಪಾಕ್ ಬೌಲರ್ಗಳನ್ನು ಕಾಡಿದರು. ಎರಡನೇ ವಿಕೆಟ್ಗೆ ಈ ಜೋಡಿ 180 ರನ್ಗಳ ಬಿರುಸಿನ ಪಾಲುದಾರಿಕೆಯನ್ನು ಮಾಡಿತು. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಗಳಿಸುವ ಅವಕಾಶವನ್ನು 5 ರನ್ಗಳಿಂದ ಕೇನ್ ವಿಲಿಯಮ್ಸ್ನ್ ಅವರನ್ನು ಕಳೆದುಕೊಂಡರು. ಗಾಯದಿಂದ ಚೇತರಿಸಿಕೊಂಡ ತಂಡಕ್ಕೆ ಮರಳಿದ ಕೇನ್ ಇನ್ನಿಂಗ್ಸ್ನಲ್ಲಿ 79 ಬಾಲ್ ಆಡಿ 10 ಬೌಂಡರಿ ಮತ್ತು 2 ಸಿಕ್ಸರ್ಗಳಿಂದ 95 ರನ್ಗಳನ್ನು ಕಲೆಹಾಕಿದರು.