ಕರ್ನಾಟಕ

karnataka

ETV Bharat / sports

ವಿಶ್ವಕಪ್ ಮೇಲೆ ಕಾಲಿಟ್ಟು​ ಕುಳಿತ ಆಸ್ಟ್ರೇಲಿಯಾ ಆಟಗಾರ: ಇನ್​​ಸ್ಟಾ ಪೋಸ್ಟ್​ ವೈರಲ್​, ಕ್ರಿಕೆಟ್​ ಅಭಿಮಾನಿಗಳು ಗರಂ

ಟ್ರೋಫಿಗೆ ಅಗೌರವ ತೋರಿರುವ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಮಿಚೆಲ್​ ಮಾರ್ಷ್
ಮಿಚೆಲ್​ ಮಾರ್ಷ್

By ETV Bharat Karnataka Team

Published : Nov 20, 2023, 3:09 PM IST

Updated : Nov 20, 2023, 3:44 PM IST

13ನೇ ಆವೃತ್ತಿಯ 2023ರ ಏಕದಿನ ಪುರಷರ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಆರನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಈ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಮಿಚೆಲ್​ ಮಾರ್ಷ್ ಅವರು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಶ್ವಕಪ್ ಮೇಲೆ ಕಾಲಿಟ್ಟು​ ಕುಳಿತ ಮಿಚೆಲ್​ ಮಾರ್ಷ್

ಫೈನಲ್​ ಪಂದ್ಯ ಗೆದ್ದ ಬಳಿಕ ಹೋಟೆಲ್​ವೊಂದರಲ್ಲಿ ಸೇರಿದ್ದ ಆಸೀಸ್​ ಆಟಗಾರರು ಜಾಲಿ ಮೂಡ್​ಗೆ​ ಜಾರಿದ್ದರು. ಈ ಸಂದರ್ಭದಲ್ಲಿ ​ವಿಶ್ವಕಪ್ ಮೇಲೆ ಕಾಲಿಟ್ಟು​ ಮಿಚೆಲ್​ ಮಾರ್ಷ್ ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಲ್ಲದೇ, ಟ್ರೋಪಿಗೆ ಅಗೌರವ ತೋರಿರುವ ಮಾರ್ಷ್​ ನಡೆಯನ್ನು ನೆಟ್ಟಿಗರು ಖಂಡಿಸಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಸೋಫಾದ ಮೇಲೆ ಕುಳಿತಿರುವ ಮಾರ್ಷ್​ ತನ್ನ ಎರಡೂ ಕಾಲಗಳನ್ನು ಟ್ರೋಪಿ ಮೇಲೆ ಇಟ್ಟು ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ. ಈ ಫೋಟೋವನ್ನು ಮೊದಲು ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಕಮಿನ್ಸ್​ ಫೋಟೋ ಶೇರ್​ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಪೋಸ್ಟ್​ ಬೆಂಕಿಯಂತೆ ಎಲ್ಲೆಡೆ ಆವರಿಸಿದ್ದು, ಮಾರ್ಷ್​ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ :ಕೊಹ್ಲಿ, ರೋಹಿತ್ ಕಣ್ಣಂಚಲಿ ನೀರು: ಅಳುತ್ತಿದ್ದ ಸಿರಾಜ್‌ಗೆ ಸಹಆಟಗಾರರಿಂದ ಸಮಾಧಾನ

ಮತ್ತೊಂದೆಡೆ ನೋಡುವುದಾದರೇ, ಆಸ್ಟ್ರೇಲಿಯನ್​ ಆಟಗಾರರಿಗೆ ಇಂತಹ ಸಂಭ್ರಮಾಚರಣೆ ಏನು ಹೊಸದಲ್ಲ. ಇದಕ್ಕೂ ಮುಂಚೆ ಕೂಡ 2021 ರಲ್ಲಿ ಕಾಂಗೂರು ಪಡೆ ಟಿ-20 ವಿಶ್ವಕಪ್​ ಗೆದ್ದು, ಚಾಂಪಿಯನ್​ ಪಟ್ಟ ಅಲಂಕರಿಸಿದಾಗ ಆಟಗಾರರು ಮೋಜು ಮಸ್ತಿ ಮಾಡಿದ್ದರು. ಆಗಲೂ ಮಾರ್ಕ್ ಸ್ಟೋಯ್ನಿಸ್​ ಅವರೊಂದಿಗೆ ಇತರೆ ಆಟಗಾರು ಶೂ ಒಳಗೆ ಬೀಯರ್​ ಸುರಿದುಕೊಂಡು ಕುಡಿದು ಕುಪ್ಪಳಿಸಿದ್ದರು. ಇದೀಗ ಆರನೇ ಬಾರಿಗೆ ವಿಶ್ವಕಪ್​ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ನಾವು ಪ್ರಾಬಲ್ಯ ಸಾಧಿಸಿದ್ದೇವೆ ಎಂಬ ಸಂದೇಶವನ್ನು ಈ ಫೋಟೋ ನೀಡುವಂತಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ಆರಂಭವಾಗಿವೆ.

ಟೂರ್ನಿಯ ಅರ್ಧದಲ್ಲೇ ವೈಯಕ್ತಿಕ ಕಾರಣಗಳಿಂದ ತವರಿಗೆ ತೆರಳಿದ್ದ ಮಾರ್ಷ್​ ಒಂದು ಪಂದ್ಯದಿಂದ ವಂಚಿತರಾಗಿ ತಂಡಕ್ಕೆ ಮರಳಿದ್ದರು. ಹೀಗಾಗಿ ಆಡಿದ 10 ಪಂದ್ಯಗಳಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಸೇರಿದಂತೆ 107.56 ರ ಸ್ಟ್ರೈಕ್ ರೇಟ್‌ನಲ್ಲಿ 49.00 ಸರಾಸರಿಯೊಂದಿಗೆ 441 ರನ್ ಗಳಿಸಿದ್ದಾರೆ. ನೆದರ್ಲೆಂಡ್ಸ್ ವಿರುದ್ಧವೂ ಎರಡು ವಿಕೆಟ್ ಪಡೆದು ಮಿಂಚಿದ್ದರು.

ಇದನ್ನೂ ಓದಿ :ತವರಿನಲ್ಲಿ ವಿಶ್ವಕಪ್​ ಕೈಚೆಲ್ಲಿದ ಭಾರತ: 6ನೇ ಬಾರಿ ಆಸೀಸ್​ಗೆ ಒಲಿದ ಚಾಂಪಿಯನ್​ ಪಟ್ಟ

Last Updated : Nov 20, 2023, 3:44 PM IST

ABOUT THE AUTHOR

...view details