ಮುಂಬೈ(ಮಹಾರಾಷ್ಟ್ರ): ಜಸ್ಪ್ರೀತ್ ಬುಮ್ರಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಮಾಡಿದ್ದಾರೆ. 48 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಲು ಯಾವುದೇ ಭಾರತೀಯ ಬೌಲರ್ಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಯಾರ್ಕರ್ ಕಿಂಗ್ ಬುಮ್ರಾ ಸಾಧಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಪಂದ್ಯದ ಮೊಟ್ಟ ಮೊದಲ ಎಸೆತದಲ್ಲೇ ಬುಮ್ರಾ ವಿಕೆಟ್ ಉರುಳಿಸಿದರು. ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ತೆಗೆದುಕೊಂಡ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.
ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬೃಹತ್ 357 ರನ್ ಪೇರಿಸಿತು. ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದರು. ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ಭಾರತ ಮೊದಲ ಬಾರಿಗೆ 300ಕ್ಕೂ ಹೆಚ್ಚು ರನ್ ಗಳಿಸಿತು.
ಈ ಸವಾಲು ಬೆನ್ನಟ್ಟುವಲ್ಲಿ ಸಂಪೂರ್ಣ ವಿಫಲವಾದ ಶ್ರೀಲಂಕಾ ತಂಡದ ಅಗ್ರ ಕ್ರಮಾಂಕ ಸಂಪೂರ್ಣ ಕುಸಿಯಿತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಪವರ್‌ಪ್ಲೇನಲ್ಲಿ ಲಂಕಾ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ಪಾಥುಮ್ ನಿಸ್ಸಾಂಕಾ ಅವರನ್ನು ಎಲ್‌ಬಿಡಬ್ಲ್ಯೂಗೆ ಕೆಡವಿದರು. ಹೀಗಾಗಿ, ಆರಂಭಿಕ ಆಟಗಾರ ಖಾತೆ ತೆರೆಯದೇ ನಿರಾಶೆಯಿಂದ ಪೆವಿಲಿಯನ್‌ಗೆ ಮರಳಿದರು. ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಬುಮ್ರಾ ಕೂಡಾ ಒಬ್ಬರು.
ನಿಸ್ಸಾಂಕಾ ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಮೊದಲ ಎಸೆತದಲ್ಲಿ ಔಟಾದ ಶ್ರೀಲಂಕಾದ ಮೂರನೇ ಬ್ಯಾಟರ್ ಎಂಬ ಕಳಪೆ ದಾಖಲೆ ಬರೆದರು. 2015ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ಲಹಿರು ತಿರುಮನೆ ಔಟಾಗಿದ್ದರು. 2019ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಿಮುತ್ ಕರುಣಾರತ್ನೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೀಗ 2023ರ ವಿಶ್ವಕಪ್‌ನಲ್ಲಿ ನಿಸ್ಸಾಂಕ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಪಂದ್ಯದೊಂದಿಗೆ ಲಂಕಾ ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ 5ನೇ ಸೋಲು ಅನುಭವಿಸಿತು.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಪ್ರಚಂಡ ಗೆಲುವು: ಶ್ರೇಯಸ್, ಸಿರಾಜ್ ಜೊತೆ ತಂಡವನ್ನು ಕೊಂಡಾಡಿದ ರೋಹಿತ್ ಶರ್ಮಾ