ನವದೆಹಲಿ:ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಏಕದಿನ ವಿಶ್ವಕಪ್ ಟೂರ್ನಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಭಾರತದ ಬೌಲರ್ಗಳ ಮಾರಕ ದಾಳಿಯ ಹೊರತಾಗಿಯೂ ಉತ್ತಮ ರನ್ ಕಲೆ ಹಾಕಿದೆ. ನಾಯಕ ಹಶ್ಮತುಲ್ಲಾ ಶಾಹಿದಿ (80) ಮತ್ತು ಅಜ್ಮತುಲ್ಲಾ ಒಮರ್ಜಾಯ್ (62) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಕೌಶಲದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಭಾರತ ಪಂದ್ಯ ಗೆಲ್ಲಲು 273 ರನ್ ಗಳಿಸಬೇಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ, ನಿರೀಕ್ಷಿತ ಆರಂಭ ನೀಡಲಿಲ್ಲ. ತಂಡ 32 ರನ್ ಗಳಿಸಿದ್ದಾಗ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (22) ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಅವರೊಂದಿಗೆ ಕಣಕ್ಕಿಳಿದಿದ್ದ ರಹಮಾನುಲ್ಲಾ ಗುರ್ಬಾಜ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 28 ಎಸೆತ ಎದುರಿಸಿದ ಗುರ್ಬಾಜ್, 1 ಸಿಕ್ಸ್, 3 ಬೌಂಡರಿಗಳೊಂದಿಗೆ 21 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ಬಲಿಯಾದರು.
ತಂಡ 63 ರನ್ ಗಳಿಸಿದ್ದಾಗ ರಹಮತ್ ಶಾ ಸೇರಿ ಒಟ್ಟು ಮೂರು ವಿಕೆಟ್ ಕಳೆದುಕೊಂಡು ಅಫ್ಘನ್ ಸಂಕಷ್ಟದಲ್ಲಿತ್ತು. ಇನ್ನೇನು ಅಫ್ಘಾನಿಸ್ತಾನದ ಕಥೆ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ತಂಡಕ್ಕೆ ಆಸರೆಯಾದ ನಾಯಕ ಹಶ್ಮತುಲ್ಲಾ ಶಾಹಿದಿ 88 ಎಸೆತದಲ್ಲಿ 1 ಸಿಕ್ಸ್, 8 ಬೌಂಡರಿಗಳ ಸಹಿತ 80 ರನ್ ಕಲೆ ಹಾಕಿ ಹೀರೋ ಆದರು. ಅಜ್ಮತುಲ್ಲಾ ಒಮರ್ಜಾಯ್ ಕೂಡ ಸಾಥ್ ನೀಡಿದರು. 69 ಎಸೆತ ಎದುರಿಸಿದ ಅಜ್ಮತುಲ್ಲಾ, ಭರ್ಜರಿ 4 ಸಿಕ್ಸ್, 2 ಬೌಂಡರಿ ಸಹಿತ (62) ಅರ್ಧ ಶತಕ ಸಿಡಿಸಿದರು. ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರ ತಲಾ ಅರ್ಧಶತಕಗಳ ನೆರವಿನಿಂದ ತಂಡ ಹೆಚ್ಚು ರನ್ ಪೇರಿಸಿತು.
ಬಳಿಕ ಬಂದ ಮೊಹಮ್ಮದ್ ನಬಿ (19), ನಜಿಬುಲ್ಲಾ ಝದ್ರಾನ್ (02), ಭರವಸೆ ಆಟಗಾರ ರಶೀದ್ ಖಾನ್ (16) ತಂಡಕ್ಕೆ ತಮ್ಮದೇ ರೀತಿಯ ಕಾಣಿಕೆ ನೀಡಿದರು. ಔಟಾಗದೇ ಇನ್ನಿಂಗ್ಸ್ ಮುಗಿಸಿದ ಮುಜೀಬ್ ಉರ್ ರಹಮಾನ್ (10) ಮತ್ತು ನವೀನ್-ಉಲ್-ಹಕ್ (9) ತಂಡದ ಮೊತ್ತವನ್ನು 272ಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ಭಾರತಕ್ಕೆ 273 ರನ್ ಟಾರ್ಗೆಟ್ ನೀಡಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇಂದಿನ ಪಂದ್ಯ ಎರಡು ಅದ್ಭುತ ಕ್ಯಾಚ್ಗಳಿಗೂ ಸಾಕ್ಷಿಯಾಯಿತು.
ಆಡುವ 11ರ ಬಳಗ: