ನವದೆಹಲಿ: ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಗೆಲ್ಲದಿದ್ದರೆ ಭಾರತವು ಪ್ರಶಸ್ತಿಯನ್ನು ಗೆಲ್ಲಲು ಇನ್ನೂ ಮೂರು ವಿಶ್ವಕಪ್ಗಳವರೆಗೆ ಕಾಯಬೇಕಾಗುತ್ತದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಕ್ಲಬ್ ಪ್ರೈರಿ ಫೈರ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಶಾಸ್ತ್ರಿ, ತಂಡದ ಹೆಚ್ಚಿನ ಸದಸ್ಯರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಹೀಗಾಗಿ ಇದು ವಿಶ್ವಕಪ್ ಪ್ರಶಸ್ತಿಯ ಬರವನ್ನು ಕೊನೆಗೊಳಿಸಲು ಭಾರತಕ್ಕೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು. ಆಡಮ್ ಗಿಲ್ಕ್ರಿಸ್ಟ್ ಮತ್ತು ಮೈಕಲ್ ವಾನ್ ಕೂಡ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು.
"ದೇಶದಲ್ಲಿ ಕ್ರಿಕೆಟ್ನ ಹುಚ್ಚು ಆವರಿಸಿದೆ. 12 ವರ್ಷಗಳ ಹಿಂದೆ ಭಾರತ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಈ ಬಾರಿ ಮತ್ತೊಮ್ಮೆ ಗೆಲುವು ಸಾಧಿಸಲು ಭಾರತಕ್ಕೆ ಅವಕಾಶವಿದೆ. ಭಾರತ ತಂಡವು ಆಡುತ್ತಿರುವ ರೀತಿಯನ್ನು ನೋಡಿದರೆ ಬಹುಶಃ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಇದು ಅತ್ಯುತ್ತಮ ಅವಕಾಶವಾಗಿದೆ. 7 ರಿಂದ 8 ಆಟಗಾರರು ಉತ್ತುಂಗದಲ್ಲಿದ್ದಾರೆ. ಈ ಬಾರಿ ಗೆಲುವು ತಪ್ಪಿಸಿಕೊಂಡರೆ ಮತ್ತೊಮ್ಮೆ ಅದರ ಬಗ್ಗೆ ಯೋಚಿಸಲು ಕೂಡ ಇನ್ನೂ ಮೂರು ವಿಶ್ವಕಪ್ಗಳವರೆಗೆ ಕಾಯಬೇಕಾಗುತ್ತದೆ." ಎಂದು ಭಾರತದ ಮಾಜಿ ಮುಖ್ಯ ಕೋಚ್ ಶಾಸ್ತ್ರಿ ಹೇಳಿದರು.
ಭಾರತೀಯ ಬೌಲಿಂಗ್ ದಾಳಿಯು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ವೇಗದ ಬೌಲರ್ಗಳು ಅತ್ಯಂತ ಪರಿಣಾಮಕಾರಿಗಿದ್ದರೆ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಸಂಯೋಜನೆಯು ಮಧ್ಯ ಓವರ್ಗಳಲ್ಲಿ ನಿಯಂತ್ರಣ ಸಾಧಿಸುತ್ತಿದೆ. ಪ್ರಸ್ತುತ ಬೌಲರ್ಗಳು ಭಾರತ ಕಂಡ ಅತ್ಯುತ್ತಮ ಬೌಲರ್ಗಳಾಗಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.