ಪುಣೆ (ಮಹಾರಾಷ್ಟ್ರ):2023ರ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಇಂದು (ಸೋಮವಾರ) ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಈ ಜಿದ್ದಾಜಿದ್ದಿನ ಮ್ಯಾಚ್ಗೆ ಸಾಕ್ಷಿಯಾಗಲಿದೆ. ಶ್ರೀಲಂಕಾ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತ್ತು. ಇದೇ ವೇಳೆ ಅಫ್ಘಾನಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಗೆಲುವು ಆಫ್ಘಾನಿಸ್ತಾನ ಆಟಗಾರರ ಮನೋಬಲವನ್ನು ಹೆಚ್ಚಿಸಿದೆ.
ಇನ್ನು, ಉಭಯ ತಂಡಗಳ ನಡುವಣ ಪಂದ್ಯಗಳ ಬಗ್ಗೆ ಹೇಳುವುದಾದರೆ, ಎರಡು ತಂಡಗಳ ನಡುವೆ ಇದುವರೆಗೆ 11 ಪಂದ್ಯಗಳು ನಡೆದಿದ್ದು, ಈ ಪೈಕಿ ಅಫ್ಘಾನಿಸ್ತಾನ 3 ಹಾಗೂ ಶ್ರೀಲಂಕಾ 7 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಟೈ ಆಗಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯವು ಮಾರ್ಚ್ 3, 2014 ರಂದು ನಡೆದಿತ್ತು. ಇನ್ನೂ ಕೊನೆಯ ಪಂದ್ಯ 5 ಸೆಪ್ಟೆಂಬರ್ 2022 ರಂದು ಜರುಗಿತ್ತು.
ಈ ಸೀಸನ್ನಲ್ಲಿ ಶ್ರೀಲಂಕಾ ತನ್ನ 5 ಪಂದ್ಯಗಳಲ್ಲಿ 2 ಅನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಒಟ್ಟು ರನ್ ರೇಟ್ -0.205 ಇದೆ. ಅಫ್ಘಾನಿಸ್ತಾನ 5 ಪಂದ್ಯಗಳಲ್ಲಿ 2 ಮ್ಯಾಚ್ಗಳನ್ನು ಗೆದ್ದಿದೆ.
ಈ ಪಿಚ್ ಬ್ಯಾಟಿಂಗ್‌ಗೆ ತುಂಬಾ ಅನುಕೂಲ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಈ ಪಿಚ್ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಸಹಾಯವನ್ನು ಪಡೆಯುತ್ತಾರೆ. ಆದರೆ, ಪಂದ್ಯ ಮುಂದುವರಿದಂತೆ ಸ್ಪಿನ್ ಬೌಲರ್ಗಳಿಗೂ ನೆರವು ಲಭಿಸುತ್ತದೆ. ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್‌ನ ಒಂದು ಪಂದ್ಯ ಮಾತ್ರ ನಡೆದಿತ್ತು. ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ.