ಪುಣೆ, ಮಹಾರಾಷ್ಟ್ರ: ವಿಶ್ವಕಪ್ನಲ್ಲಿ ಸತತ ಎರಡು ಗೆಲುವಿನೊಂದಿಗೆ ಪುಟಿದೇಳಿರುವ ಶ್ರೀಲಂಕಾ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಈ ತಂಡಗಳ ಸೆಮಿಸ್ ಅವಕಾಶಗಳು ಇನ್ನೂ ಜೀವಂತವಾಗಿವೆ.
ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಡಬಲ್ ಆತ್ಮವಿಶ್ವಾಸದಲ್ಲಿರುವ ಲಂಕಾ ಫೇವರಿಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದು ಚಿಕ್ಕ ತಂಡವೇ ಆಗಿದ್ದರೂ ಅಫ್ಘಾನಿಸ್ತಾನವನ್ನು ಕಡಿಮೆ ಅಂದಾಜು ಮಾಡುವುದು ತಪ್ಪಾಗುತ್ತದೆ. ಅಫ್ಘಾನಿಸ್ತಾನ ತಂಡ ಯಾವುದೇ ತಂಡವನ್ನು ಸೋಲಿಸಬಹುದು ಎಂದು ಈಗಾಗಲೇ ಸಾಬೀತುಪಡಿಸಿದೆ.
ಇನ್ನು ಅಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಹಾಗೂ ಪಾಕಿಸ್ತಾನಕ್ಕೆ ತಂಡಗಳಿಗೆ ಶಾಕ್ ನೀಡಿರುವುದು ಗೊತ್ತೇ ಇದೆ. ಪ್ರಮುಖ ವೇಗದ ಬೌಲರ್ ಲಹಿರು ಕುಮಾರ ಗಾಯದ ಸಮಸ್ಯೆಯಿಂದ ಅಲಭ್ಯವಾಗಿರುವುದರಿಂದ ಲಂಕಾಗೆ ಹಿನ್ನಡೆಯಾಗಲಿದೆ. ಮಧ್ಯಾಹ್ನ 1.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದ್ದು, ಈ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ.
ಕುಮಾರ್ ಬದಲಿಗೆ ಚಮೀರಾಗೆ ಅವಕಾಶ: ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಸ್ಟಾರ್ ಆಲ್ ರೌಂಡರ್ ಹಸರಂಗ ಪಂದ್ಯಾವಳಿಗೂ ಮುನ್ನ ಹೊರ ಬಿದ್ದಿರುವ ಸಂಗತಿ ಗೊತ್ತೇ ಇದೆ. ಟೂರ್ನಮೆಂಟ್ ನಡೆಯುತ್ತಿರುವಾಗಲೇ ನಾಯಕ ಸನಕ ಮತ್ತು ವೇಗಿ ಪತಿರಾನ ಸಹ ಗಾಯದ ಸಮಸ್ಯೆಯಿಂದ ಈಗಾಗಲೇ ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ. ಈಗ ವೇಗಿ ಲಹಿರು ಕುಮಾರ ಸಹ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ವೇಗಿ ದುಷ್ಮಂತ ಚಮೀರಾ ಶ್ರೀಲಂಕಾ ತಂಡವನ್ನು ಸೇರಿಕೊಂಡಿದ್ದಾರೆ.