ಮುಂಬೈ(ಮಹಾರಾಷ್ಟ್ರ):ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೆಮಿ ಫೈನಲ್ ತಲುಪಿವೆ. ಟೀಂ ಇಂಡಿಯಾ ಲೀಗ್ ಹಂತದಲ್ಲಿ 8 ಪಂದ್ಯಗಳನ್ನಾಡಿದ್ದು, ಎಲ್ಲವನ್ನೂ ಗೆದ್ದು ಅಗ್ರಸ್ಥಾನದಲ್ಲಿದೆ. ಭಾರತಕ್ಕೆ ಸೆಮಿಸ್‌ನಲ್ಲಿ ಪ್ರತಿಸ್ಪರ್ಧಿ ಯಾರು ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ, ಇನ್ನೆರಡು ಸೆಮಿಫೈನಲ್‌ಗಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ.
ಆಸ್ಟ್ರೇಲಿಯಾ ಎಂಟ್ರಿ ಬಹುತೇಕ ಖಚಿತ:ಆಸ್ಟ್ರೇಲಿಯಾ ಕೂಡ ಸೆಮಿಸ್ ತಲುಪುವುದು ಬಹುತೇಕ ಖಚಿತವಾಗಿದೆ. ಸೆಮಿಸ್‌ನಲ್ಲಿ ಅವರು ಯಾವ ಸ್ಥಾನ ಅಲಂಕರಿಸಲಿದ್ದಾರೆ ಎಂಬುದು ಉಳಿದ ಪಂದ್ಯಗಳು ಮತ್ತು ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿದೆ. 7 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 10 ಅಂಕ ಪಡೆದು ತಂಡ ಮುಂದುವರಿದಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಅಫ್ಘಾನಿಸ್ತಾನದೊಂದಿಗೆ ಇದು ಸ್ವಲ್ಪ ಅಪಾಯಕಾರಿ, ಆದರೆ ಬಾಂಗ್ಲಾದೇಶದಿಂದ ಹೆಚ್ಚಿನ ಪ್ರತಿರೋಧ ಇಲ್ಲದಿರಬಹುದು. ಎರಡೂ ಪಂದ್ಯಗಳಲ್ಲಿ ಸೋಲುಂಡರೂ ಸಹಿತ ಆಸ್ಟ್ರೇಲಿಯಾ ಸೆಮಿಸ್ ತಲುಪುವ ಅವಕಾಶ ಹೆಚ್ಚು. ಇದು ನೆಟ್ ರನ್‌ರೇಟ್ ಮೇಲೆ ಅವಲಂಬಿಸಿದೆ.
ಕಿವೀಸ್ಗೆ ಎದುರಾದ ಸಂಕಷ್ಟ:ಕಿವೀಸ್ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಯತ್ತ ಸಾಗಿತು. ಆದರೆ ನಂತರ ಕುಸಿಯುತ್ತಾ ಸಾಗಿತು. ಸತತ ನಾಲ್ಕು ಸೋಲುಂಡ ಬಳಿಕ ಸೆಮಿಸ್‌ಗಾಗಿ ಸೆಣಸಾಡಬೇಕಾಯಿತು. ಸದ್ಯ 8 ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ಸೋಲುಗಳೊಂದಿಗೆ ಎಂಟು ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ.
ನವೆಂಬರ್ 9ರಂದು ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಕೊನೆಯ ಪಂದ್ಯವ ಆಡಲಿದೆ. ಈ ಪಂದ್ಯದಲ್ಲಿ ಕಿವೀಸ್ ಗೆದ್ದರೂ ಸೆಮಿ ತಲುಪುವ ಭರವಸೆ ತೀರಾ ಕಡಿಮೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತರೆ ಮಾತ್ರ ಕಿವೀಸ್ ನಾಕೌಟ್ ತಲುಪುತ್ತದೆ. ಒಂದು ವೇಳೆ ಕಿವೀಸ್ ಸೋಲನುಭವಿಸಿದರೆ ಸೆಮೀಸ್ ಭರವಸೆ ಕೈಬಿಡಬೇಕಾಗುತ್ತದೆ. ನೆಟ್ ರನ್ ರೇಟ್ ಪ್ರಕಾರ ಸೆಮಿಸ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
ಪಾಕ್ಗೆ ಇನ್ನೂ ಇದೆ ಅವಕಾಶ:ಪಾಕಿಸ್ತಾನದ ಈವರೆಗಿನ ಪ್ರದರ್ಶನವನ್ನು ನೋಡಿದ ನಂತರ ಅವರು ಸೆಮಿಸ್ ರೇಸ್‌ನಲ್ಲಿರುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಪಾಕಿಸ್ತಾನವನ್ನು ನಿರೀಕ್ಷೆಗೂ ಮೀರಿದ ತಂಡ ಎಂದು ಬಣ್ಣಿಸಲಾಗುತ್ತದೆ. ಇದುವರೆಗೆ 8 ಪಂದ್ಯಗಳಲ್ಲಿ 4 ಗೆಲುವು ಹಾಗೂ 4 ಸೋಲಿನೊಂದಿಗೆ 8 ಅಂಕ ಗಳಿಸಿದೆ. ಕಳೆದ ಪಂದ್ಯದಲ್ಲಿ ಕಿವೀಸ್ ವಿರುದ್ಧದ ಪ್ರಭಾವಿ ಜಯದೊಂದಿಗೆ ಅವರು ತಮ್ಮ ನೆಟ್ ರನ್‌ರೇಟ್ ಸುಧಾರಿಸಿದ್ದಾರೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ (ನವೆಂಬರ್ 11) ಇಂಗ್ಲೆಂಡ್ ವಿರುದ್ಧ ಆಡಲಿದೆ. ಫಾರ್ಮ್‌ನಲ್ಲಿ ಇಂಗ್ಲೆಂಡ್ ಉತ್ತಮವಾಗಿಲ್ಲ. ಆ ದಿನ ಪಾಕ್ ಗೆಲುವಿನ ನಗೆ ಬೀರಿದರೆ ಸೆಮಿಸ್‌ಗೆ ತಲುಪುವುದು ಬಹತೇಕ ಖಚಿತ. ಒಂದು ವೇಳೆ ಸೋತರೂ ಅವಕಾಶಗಳಿವೆ. ಇತರ ತಂಡಗಳ ಫಲಿತಾಂಶಗಳು ಮತ್ತು ರನ್ ರೇಟ್ ನಿರ್ಣಾಯಕ.
ಲೆಕ್ಕಾಚಾರ ತಲೆಕೆಳಗು ಮಾಡುತ್ತಾ ಅಫ್ಘಾನ್?:ಭರ್ಜರಿ ಜಯದೊಂದಿಗೆ ವಿಶ್ವಕಪ್ ಸೆಮಿಸ್ ರೇಸ್ ಅನ್ನು ರಸಭರಿತವಾಗಿ ಬದಲಾಯಿಸಿದ ತಂಡ ಅಂದ್ರೆ ಅದು ಅಫ್ಘಾನಿಸ್ತಾನ. ಇಂಗ್ಲೆಂಡ್ ತಂಡವನ್ನು ಸೋಲಿಸಿ ನಂತರ ಕಿವೀಸ್ ಕೈಯಲ್ಲಿ ಭಾರಿ ಸೋಲು ಅನುಭವಿಸಿತು ಅಫ್ಘಾನ್. ನಂತರ ಚೇತರಿಸಿಕೊಂಡ ರೀತಿ ಅದ್ಭುತವಾಗಿದೆ. ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸೆಮಿಸ್ ರೇಸ್ಪ್ರವೇಶಿಸಿದ್ದಾರೆ. ಸದ್ಯ 7 ಪಂದ್ಯಗಳಲ್ಲಿ 4 ಗೆಲುವು ಹಾಗೂ 3 ಸೋಲಿನೊಂದಿಗೆ 8 ಅಂಕ ಹೊಂದಿದೆ ಅಫ್ಘಾನಿಸ್ತಾನ.
ನ್ಯೂಜಿಲೆಂಡ್ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನಕ್ಕೆ ಸೆಮಿಸ್ ಸಾಧ್ಯತೆ ಹೆಚ್ಚು. ಆದರೆ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿರುವುದು ಅಫ್ಘಾನಿಸ್ತಾನಕ್ಕೆ ಕೊಂಚ ಮುಜುಗರ ತಂದಿದೆ. ಅಫ್ಘಾನಿಸ್ತಾನವು ನವೆಂಬರ್ 7ರಂದು ಆಸ್ಟ್ರೇಲಿಯಾ ಮತ್ತು ನವೆಂಬರ್ 10ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈಗಾಗಲೇ ಮಹತ್ವದ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ಒಂದು ಪಂದ್ಯ ಗೆದ್ದರೂ ಸೆಮೀಸ್ ತಲುಪುವ ಸಾಧ್ಯತೆ ಇದೆ. ಅಫ್ಘಾನಿಸ್ತಾನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮನೆಗೆ ಹೋಗುವುದು ಖಚಿತ.
ಪಾಯಿಂಟ್ ಪಟ್ಟಿಯಲ್ಲಿ ಭಾರತದ ಮೊದಲ ಸ್ಥಾನವನ್ನು ಯಾರೂ ಆಕ್ರಮಿಸಲು ಸಾಧ್ಯವಿಲ್ಲ. ಎರಡು ಮತ್ತು ಮೂರನೇ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು. ನಾಲ್ಕನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸೆಮಿಸ್‌ನಲ್ಲಿ ಮೊದಲ ಸ್ಥಾನ ಪಡೆದ ತಂಡ ನಾಲ್ಕನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಎರಡನೇ ಸ್ಥಾನ ಪಡೆದ ತಂಡ ಮೂರನೇ ಸ್ಥಾನ ಪಡೆದ ತಂಡದೊಂದಿಗೆ ಆಡಲಿದೆ.
ಇದನ್ನೂ ಓದಿ:ವಿಶ್ವಕಪ್: ನಾಳೆ ಆಸ್ಟ್ರೇಲಿಯಾ - ಅಫ್ಘಾನ್ ಪಂದ್ಯ; ಸೆಮೀಸ್‌ಗೆ ಲಗ್ಗೆ ಇಡಲು ಪೈಪೋಟಿ