ಮುಂಬೈ (ಮಹಾರಾಷ್ಟ್ರ): ಸತತ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ, ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿದೆ. ನಾಯಕ ರೋಹಿತ್ ಶರ್ಮಾ ಬಳಗದ ಅತ್ಯುತ್ತಮ ಪ್ರದರ್ಶನದಿಂದ ನಾಕೌಟ್ ತಂಡ ಈ ಹಂತ ತಲುಪಿದೆ. ಪಂದ್ಯದ ಬಳಿಕ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡರು.
"ನಾವು ಅಧಿಕೃತವಾಗಿ ಸೆಮಿಫೈನಲ್ ತಲುಪಿರುವುದಕ್ಕೆ ತುಂಬಾ ಖುಷಿಯಾಗಿದೆ. ಚೆನ್ನೈನಲ್ಲಿ ವಿಶ್ವಕಪ್ ಅಭಿಯಾನ ಪ್ರಾರಂಭಿಸಿದಾಗ ಮೊದಲು ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು, ನಂತರ ಫೈನಲ್‌ಗೆ ಅರ್ಹತೆ ಪಡೆಯುವ ಗುರಿ ನಮ್ಮದಾಗಿತ್ತು" ಎಂದರು.
"ನಾವು ಈ ಏಳು ಪಂದ್ಯಗಳನ್ನು ಆಡಿದ ರೀತಿ ತುಂಬಾ ಚೆನ್ನಾಗಿತ್ತು. ಇಲ್ಲಿಯವರೆಗೆ ನಡೆದ ಎಲ್ಲ ಪಂದ್ಯಗಳಲ್ಲಿ ಎಲ್ಲರೂ ತಮ್ಮ ಶಕ್ತಿ ಮೀರಿ ಪ್ರಯತ್ನ ತೋರಿದ್ದಾರೆ. ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಬಯಸಿದಾಗ ನಮಗೆ ಈ ರೀತಿಯ ಸ್ಪಿರಿಟ್ ಬೇಕು. ಯಾವುದೇ ಪಿಚ್‌ನಲ್ಲಿ 350 ರನ್ ಉತ್ತಮ ಸ್ಕೋರ್ ಆಗಿದೆ. ಇದರ ಕ್ರೆಡಿಟ್ ಬ್ಯಾಟಿಂಗ್ ಘಟಕಕ್ಕೆ ಸಲ್ಲುತ್ತದೆ" ಎಂದು ಹೇಳಿದರು.
ತಮ್ಮ ಬ್ಯಾಟರ್‌ಗಳನ್ನು ಶ್ಲಾಘಿಸುವ ಜೊತೆಗೆ 56 ಎಸೆತಗಳಲ್ಲಿ 82 ರನ್ ಗಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಶರ್ಮಾ ವಿಶೇಷವಾಗಿ ಪ್ರಶಂಸಿಸಿದರು. "ಶ್ರೇಯಸ್ ಮಾನಸಿಕವಾಗಿ ತುಂಬಾ ಬಲಶಾಲಿ ಆಟಗಾರ. ತನ್ನ ಜವಾಬ್ದಾರಿಯನ್ನು ನಿಖರವಾಗಿ ನಿಭಾಯಿಸಿದರು. ಅದನ್ನೇ ನಾವು ಅವರಿಂದ ನಿರೀಕ್ಷಿಸುತ್ತೇವೆ. ಯಾವುದೇ ಸವಾಲನ್ನು ಎದುರಿಸಲು ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ" ಎಂದು ತಿಳಿಸಿದರು.