ಬೆಂಗಳೂರು:ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಟಾಸ್ ಗೆದ್ದಿರುವ ಪಾಕ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.
ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಂದಿನ ಪಂದ್ಯವನ್ನು ಗೆಲ್ಲುವ ತಂಡವು ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಸುಲಭ ಮಾರ್ಗ ಕಂಡುಕೊಳ್ಳಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಒಂದು ವೇಳೆ ಪಂದ್ಯ ರದ್ದಾದ್ರೆ ಉಭಯ ತಂಡಗಳು 1-1 ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು. ಆಗ ಸೆಮಿಗೆ ಪಾಕ್ನ ಹಾದಿ ತುಂಬ ಕಠಿಣವಾಗುತ್ತದೆ.
ಈ ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನ ತಂಡವು ಇದುವರೆಗೆ 7 ಪಂದ್ಯಗಳಲ್ಲಿ 3 ರಲ್ಲಿ ಮಾತ್ರ ಗೆದ್ದಿದೆ. ಉಳಿದ 4 ಪಂದ್ಯಗಳಲ್ಲಿ ಸೋತಿದ್ದು, ಪ್ರಸ್ತುತ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇನ್ನು ನ್ಯೂಜಿಲೆಂಡ್ ತಂಡ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡವು ಪಾಕ್ ವಿರುದ್ಧ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿದೆ.