ಬೆಂಗಳೂರು:ಕ್ರಿಕೆಟ್ ವಿಶ್ವಕಪ್ 2023ರ (ICC Cricket World Cup 2023) 18ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿದ್ದು, ಟಾಸ್ ಗೆದ್ದಿರುವ ಪಾಕಿಸ್ತಾನ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಇನ್ನು ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನ ತಂಡ 3 ಪಂದ್ಯಗಳಲ್ಲಿ 2 ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನವು ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲನ್ನು ಕಂಡಿದೆ. ಇನ್ನು 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ 3 ಪಂದ್ಯಗಳಲ್ಲಿ 1 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾವು ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಸೋಲುಗಳನ್ನು ಎದುರಿಸಬೇಕಾಯಿತು. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಆ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
2023ರ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಲು ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಈ ಪಂದ್ಯವನ್ನು ಗೆಲ್ಲಲು ಉಭಯ ತಂಡಗಳು ಸಂಪೂರ್ಣ ಶ್ರಮ ವಹಿಸಬೇಕಾಗಿದೆ. ಇಂದು ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಉಭಯ ತಂಡಗಳ ನಡುವೆ ನಡೆದ ಕೊನೆಯ 5 ಏಕದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾ 3 ಬಾರಿ ಪಂದ್ಯ ಗೆದ್ರೆ, ಪಾಕಿಸ್ತಾನ 2ರಲ್ಲಿ ಜಯ ಗಳಿಸಿದೆ.
ಬ್ಯಾಟಿಂಗ್ ಮಾಡಲು ಸುಲಭ: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಪಿಚ್ ಸಮತಟ್ಟಾಗಿದ್ದು, ಉತ್ತಮ ಬೌನ್ಸ್ ನೀಡುತ್ತದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಲಿದೆ. ಆಟವು ಮುಂದುವರೆದಂತೆ ಸ್ಪಿನ್ನರ್‌ಗಳು ಮುಖ್ಯ ಪಾತ್ರವನ್ನು ವಹಿಸುವುದನ್ನು ಕಾಣಬಹುದಾಗಿದೆ. ಈ ಪಿಚ್‌ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 310 ರನ್ ಆಗಿದೆ. ಈ ಮೈದಾದನಲ್ಲಿ ರನ್ ಚೇಸಿಂಗ್ ಮಾಡಿರುವ ತಂಡಗಳು ಹೆಚ್ಚು ಯಶಸ್ವಿಯಾಗಿವೆ.