ಮುಂಬೈ (ಮಹಾರಾಷ್ಟ್ರ):ವಿಶ್ವಕಪ್ ಕ್ರಿಕೆಟ್‌ನಲ್ಲಿಭಾರತ ತಂಡ ತಾನು ಆಡಿರುವ 6 ಪಂದ್ಯಗಳಲ್ಲಿ ಆರನ್ನೂ ಗೆದ್ದುಕೊಂಡಿದೆ. ತಂಡ ಬಹುತೇಕ ಸೆಮಿಫೈನಲ್ ಹಂತ ಬಂದು ತಲುಪಿದೆ. ಆದರೆ ಅಧಿಕೃತವಾಗಿ ಸೆಮಿಗೆ ತಲುಪಲು ಇನ್ನೂ ಒಂದು ಗೆಲುವು ಬೇಕಿದೆ. ಆ ಹೆಜ್ಜೆ ತುಂಬಾ ಕಷ್ಟವಾಗದೇ ಇರಬಹುದು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಎಸೆದ ಸವಾಲುಗಳ ವಿರುದ್ಧವೂ ಗೆದ್ದ ಟೀಂ ಇಂಡಿಯಾ ಇಂದು ಶ್ರೀಲಂಕಾ ವಿರುದ್ಧ ಮೈದಾನಕ್ಕಿಳಿದಿದೆ.
ವಿಶ್ವಕಪ್‌ನಲ್ಲಿ ಆಡಿದ ಆರು ಏಕದಿನ ಪಂದ್ಯಗಳಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಸೆಮೀಸ್‌ನ ಸಮೀಪ ಬಂದಿರುವ ಟೀಂ ಇಂಡಿಯಾ ಅಧಿಕೃತವಾಗಿ ನಾಕೌಟ್ ಸ್ಥಾನ ಪಡೆಯುವತ್ತ ಗಮನಹರಿಸಿದೆ. ಲಂಕಾ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದು, ಸೆಮೀಸ್ ರೇಸ್‌ನಲ್ಲಿ ತೀರಾ ಹಿಂದುಳಿದಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನು ಕಂಡಿರುವುದು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.
ಶ್ರೇಯಸ್ ಮತ್ತೊಂದು ಅವಕಾಶ: ಟೂರ್ನಿ ಮುಂದುವರಿದಂತೆ ಟೀಂ ಇಂಡಿಯಾ ಬಲಿಷ್ಠವಾಗುತ್ತಿದೆ. ಎಲ್ಲಾ ಪ್ರಮುಖ ಆಟಗಾರರು ತಮ್ಮ ಪ್ರದರ್ಶನವನ್ನು ಉತ್ತಮವಾಗಿಯೇ ನೀಡುತ್ತಿದ್ದಾರೆ. ತಂಡದಲ್ಲಿ ಅವಕಾಶ ಪಡೆದ ವೇಗಿ ಮೊಹಮ್ಮದ್ ಶಮಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಫಾರ್ಮ್ ಮಾತ್ರ ಚಿಂತಾಜನಕವಾಗಿದೆ.
ಟೂರ್ನಿಯಲ್ಲಿ ಶ್ರೇಯಸ್ ಆರು ಪಂದ್ಯಗಳಲ್ಲಿ 134 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಶ್ರೇಯಸ್ ಅನವಶ್ಯಕ ಶಾಟ್ ಮೂಲಕ ವಿಕೆಟ್ ಕೈಚೆಲ್ಲಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು. ಇಂದಿನ ಪಂದ್ಯದಲ್ಲಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಫಾರ್ಮ್ ಕಂಡುಕೊಳ್ಳುವುದು ಶ್ರೇಯಸ್ಗೆ ಅತ್ಯವಶ್ಯಕ.