ಬೆಂಗಳೂರು:ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನ 41ನೇ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್‌ಗೇರುವ ತವಕದಲ್ಲಿ ಕಿವೀಸ್ ಇದೆ. ಮತ್ತೊಂದೆಡೆ, ಐಸಿಸಿಯ ನೂತನ ನಿಯಮಾವಳಿಯನುಸಾರ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಗಿಟ್ಟಿಸಲು ಸಿಂಹಳೀಯರಿಗೆ ಇಂದಿನ ಗೆಲುವು ಅನಿವಾರ್ಯ. ಪ್ರಸ್ತುತ 8 ಅಂಕಗಳನ್ನು ಹೊಂದಿರುವ ಕೇನ್ ವಿಲಿಯಮ್ಸನ್ ತಂಡ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಪಾಕಿಸ್ತಾನದೊಂದಿಗೂ ಪೈಪೋಟಿ ನಡೆಸಬೇಕಿದೆ.
ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ 401 ರನ್ ಗಳಿಸಿದ ಹೊರತಾಗಿಯೂ ಕಿವೀಸ್ ಪಾಳಯಕ್ಕೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಮಳೆಬಾಧಿತ ಪಂದ್ಯವನ್ನು ಬಾಬರ್ ಬಳಗ ಸ್ಪಷ್ಟ ಲೆಕ್ಕಾಚಾರದೊಂದಿಗೆ ಡಕ್ ವರ್ತ್ ಲೂಯಿಸ್ ನಿಯಮಂತೆ 21 ರನ್‌ಗಳಿಂದ ಗೆದ್ದು ಬೀಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಫಖರ್ ಜಮಾನ್ ಅಮೋಘ ಶತಕ ಹಾಗೂ ನಾಯಕ ಬಾಬರ್ ಅಜಮ್ ಅವರ ಅರ್ಧಶತಕದಾಟ ನ್ಯೂಜಿಲೆಂಡ್ ತಂಡದ ಜಯ ಕಸಿದುಕೊಂಡಿತ್ತು. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿಯೂ ಸಹ ನ್ಯೂಜಿಲೆಂಡ್ ಜಯದ ಕನಸಿಗೆ ವರುಣ ಅಡ್ಡಿಪಡಿಸುವ ಸಾಧ್ಯತೆಯಿದೆ.
ಸೆಮಿಫೈನಲ್ ರೇಸ್ನಲ್ಲಿ ಜೀವಂತವಾಗುಳಿಯಲು ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಗೆಲುವು ಪಡೆಯಲೇಬೇಕಿದೆ. ಒಂದು ವೇಳೆ ಪಂದ್ಯ ರದ್ದಾದರೆ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗಾಗಿ ನ್ಯೂಜಿಲೆಂಡ್ ಕಾಯಲೇಬೇಕು. ಮತ್ತೊಂದೆಡೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ನ್ಯೂಜಿಲೆಂಡ್ ವಿರುದ್ಧದ ಗೆಲುವು ಶ್ರೀಲಂಕಾಗೆ ಅನಿವಾರ್ಯ.
8 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು +0.036 ನೆಟ್ ರನ್‌ರೇಟ್‌ನೊಂದಿಗೆ 8 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌ಗಿಂತಲೂ ಒಂದು ಸ್ಥಾನ ಕೆಳಗಿದೆ. ಒಂದು ವೇಳೆ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ನವೆಂಬರ್ 11ರಂದು ಇಂಗ್ಲೆಂಡ್ ವಿರುದ್ಧದ ತನ್ನ ಲೀಗ್‌ನ ಕೊನೆಯ ಪಂದ್ಯವನ್ನು ಜಯಿಸಬೇಕಾಗುತ್ತದೆ. ಆಗ 9 ಅಂಕಗಳನ್ನ ಹೊಂದಿರುವ ನ್ಯೂಜಿಲೆಂಡ್‌ಗಿಂತಲೂ 10 ಅಂಕಗಳೊಂದಿಗೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೇಲೇರಲಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ಪರಾಭವಗೊಂಡರೆ ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.
ಹವಾಮಾನ ಕುರಿತ ಖಾಸಗಿ ವೆಬ್ಸೈಟ್ವೊಂದರ ಪ್ರಕಾರ, ಇಂದು ಮದ್ಯಾಹ್ನ ಟಾಸ್ ವೇಳೆಗೆ ಚಳಿಗಾಳಿ ಆರಂಭವಾಗುವ ಸಾಧ್ಯತೆಯಿದೆ. 1:30 ರಿಂದ 3:30ರ ವರೆಗೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, 7:30ರವರೆಗೂ ಮಳೆಯಾಗುವ ಸಾಧ್ಯತೆ ಶೇ 50ರಷ್ಟಿದೆ.