ಪುಣೆ (ಮಹಾರಾಷ್ಟ್ರ): ಇದುವರೆಗೆ ಆಡಿದ 7 ಪಂದ್ಯಗಳ ಪೈಕಿ ಸತತ 4 ಜಯ ಸಾಧಿಸಿ, ನಂತರ ಹ್ಯಾಟ್ರಿಕ್ ಸೋಲು ಕಂಡಿರುವ ನ್ಯೂಜಿಲೆಂಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ಮ್ಯಾಟ್ ಹೆನ್ರಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಓವರ್‌ನ ಮಧ್ಯದಲ್ಲೇ ಅವರು ಮೈದಾನ ಬಿಟ್ಟು ಹೊರ ನಡೆಯಬೇಕಾಯಿತು. ತಂಡದ ಯಶಸ್ಸಿಗೆ ಹೆನ್ರಿ ಗಾಯದ ನಡುವೆಯೂ ಮತ್ತೆ ಬ್ಯಾಟಿಂಗ್‌ಗೆ ಮರಳಿದ್ದರು. ಈ ಹಂತದಲ್ಲಿ ಗಾಯದ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹೆನ್ರಿ ಅವರ ಗಾಯದ ತೀವ್ರತೆಯ ಬಗ್ಗೆ ಅಧಿಕೃತ ಸ್ಪಷ್ಟೀಕರಣವಿಲ್ಲದಿದ್ದರೂ, ಮುಂದಿನ ಒಂದೆರಡು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ತಂಡಕ್ಕೆ ಏಟಿನ ಮೇಲೆ ಏಟು: ಅಕ್ಟೋಬರ್ 5ರಂದು ಆರಂಭವಾದ ವಿಶ್ವಕಪ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆ ಬಳಿಕ ಕಿವೀಸ್ ತಂಡ ಸತತ ನಾಲ್ಕು ಗೆಲುವುಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದೆ. ಇದರೊಂದಿಗೆ ಸೆಮಿಫೈನಲ್ ಗ್ಯಾರಂಟಿ ಎಂಬಂತೆ ಕಾಣಿಸಿಕೊಂಡಿದ್ದ ನ್ಯೂಜಿಲೆಂಡ್ ತೀವ್ರ ಹಿನ್ನಡೆ ಅನುಭವಿಸಿತು.