ಲಖನೌ(ಉತ್ತರಪ್ರದೇಶ):ಆರಂಭಿಕ ಜೋಡಿ ಪಾಥುಮ್ ನಿಸ್ಸಾಂಕಾ ಮತ್ತು ಕುಸಲ್ ಪೆರೆರಾ ನಡುವೆ ಶತಕದ ಜೊತೆಯಾಟವಿತ್ತು. ಈ ಜೋಡಿಯನ್ನು ಮುರಿಯಲು ಕಾಂಗರೂ ಬೌಲರ್ಗಳು ಚಿಂತಿತರಾಗಿದ್ದರು. ಲಂಕಾ ಬ್ಯಾಟ್ಸ್ಮನ್ ಕುಸಲ್ ಪೆರೆರಾಗೆ ಆಟದ ಸಮಯದಲ್ಲಿ ಬೌಲ್ ಬಡಿದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ತಂಡ ಸೋಲಿನೊಂದಿಗೆ ವಿಶ್ವಕಪ್ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಭಾರತದಿಂದ ಸೋಲನ್ನು ಎದುರಿಸಬೇಕಾಯಿತು. ಬಳಿಕ ದಕ್ಷಿಣ ಆಫ್ರಿಕಾ 134 ರನ್ಗಳಿಂದ ಹೀನಾಯ ಸೋಲು ಕಂಡಿತ್ತು. ಆದರೆ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಬೌಲರ್ಗಳ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ ಮೊದಲ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಪೆರೇರಾ ಆಸ್ಟ್ರೇಲಿಯಾ ವಿರುದ್ಧ ಅಮೋಘ ಆರಂಭ ನೀಡಿದರು. ಇಬ್ಬರೂ ಆಟಗಾರರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಕಾಂಗರೂ ಬೌಲರ್ಗಳನ್ನು ಹಿಮ್ಮೆಟ್ಟಿಸುತ್ತಿದ್ದರು.
ನಿಸ್ಸಾಂಕ ಮತ್ತು ಕುಸಲ್ ಮೊದಲ ವಿಕೆಟ್ಗೆ 125 ರನ್ಗಳ ಜೊತೆಯಾಟವಾಡಿದರು. ಆಸ್ಟ್ರೇಲಿಯಾ ವಿಕೆಟ್ ಪಡೆಯುವ ಹಂಬಲದಲ್ಲಿತ್ತು. ಇನ್ನಿಂಗ್ಸ್ ನ 17ನೇ ಓವರ್ನ ಕೊನೆಯ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅಪಾಯಕಾರಿ ಬೌನ್ಸರ್ ಎಸೆದರು. ಇದು ನೇರವಾಗಿ ಕುಸಲ್ ಪೆರೇರಾ ಅವರ ತಲೆ ಮೇಲಿದ್ದ ಹೆಲ್ಮಟ್ಗೆ ಬಡಿಯಿತು. ಬಾಲ್ ಬಡಿದ ನಂತರ ಬ್ಯಾಟ್ಸ್ಮನ್ ಸಂಪೂರ್ಣವಾಗಿ ಆಘಾತಕ್ಕೊಳಗಾದರು. ಅದರ ನಂತರ ಫಿಜಿಯೋ ತೆರಪಿಸ್ಟ್ರನ್ನು ತಕ್ಷಣವೇ ತಪಾಸಣೆಗಾಗಿ ಮೈದಾನಕ್ಕೆ ಕರೆಸಲಾಯಿತು. ತಲೆಗೆ ಬಾಲ್ ಬಿದ್ದ ತಕ್ಷಣ ಆಸ್ಟ್ರೇಲಿಯಾ ಆಟಗಾರರು ಪೆರೆರಾ ಬಳಿ ಬಂದು ಆರೋಗ್ಯ ವಿಚಾರಿಸಿದರು. ಬ್ಯಾಟ್ಸ್ಮನ್ಗೆ ಯಾವುದೇ ಗಾಯಗಳಾಗದೇ ದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಸಮಾಧಾನದ ಸಂಗತಿ.