ಮುಂಬೈ(ಮಹಾರಾಷ್ಟ್ರ): 2023ರ ವಿಶ್ವಕಪ್ ಕ್ರಿಕೆಟ್ನ 33ನೇ ಪಂದ್ಯ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ- ಶ್ರೀಲಂಕಾ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಭಾರತ ಬೃಹತ್ ಗೆಲುವು ದಾಖಲಿಸುವುದರೊಂದಿಗೆ ಸೆಮೀಸ್ ಪ್ರವೇಶಿಸಿತು. ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಂತರ ಮತ್ತೊಂದು ಹೈಲೆಟ್ ಅಂದ್ರೆ ಅದು ಕೆ.ಎಲ್.ರಾಹುಲ್ ಪಡೆದ ಡಿಆರ್ಎಸ್ ರಿವ್ಯೂ.
ಟಾಸ್ ಗೆದ್ದು ಸೆಕೆಂಡ್ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡಕ್ಕೆ ಭಾರತದ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಮೊದಲ ವಿಕೆಟ್ ಪಡೆದು ಯಾರ್ಕರ್ ಕಿಂಗ್ ಬುಮ್ರಾ ಮಿಂಚಿದರು. ನಂತರ ಕ್ರೀಸಿಗೆ ಬಂದ ಬ್ಯಾಟರ್ಗಳು ಹೆಚ್ಚು ಹೊತ್ತು ನಿಲ್ಲದೇ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
11ನೇ ಓವರ್ನಲ್ಲಿ ದುಷ್ಮಂತ ಚಮೀರಾ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಶಮಿ ಬೌಲಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ಓವರ್ನ 3ನೇ ಎಸೆತವನ್ನು ಶಮಿ ಚಮೀರಾ ಅವರ ಲೆಗ್ ಸೈಡ್ಗೆ ಬೌನ್ಸರ್ ಮಾಡಿದರು. ಈ ಎಸೆತವನ್ನು ಚಮೀರಾ ವೈಲ್ಡ್ ಪುಲ್ ಮಾಡಲು ಪ್ರಯತ್ನಿಸಿದ್ದಾರೆ. ಚೆಂಡು ಗ್ಲೌಸ್ಗೆ ತಾಗಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಕೈ ಸೇರಿತ್ತು. ಆದರೆ ಅಂಪೈರ್ ಇದನ್ನು ವೈಡ್ ನಿರ್ಧಾರ ನೀಡಿದರು. ಅಂಪೈರ್ ನಿರ್ಣಯದಿಂದ ಸಮಾಧಾನವಾಗದೇ ರಾಹುಲ್ ನಾಯಕ ರೋಹಿತ್ ಅವರ ಜೊತೆ ಚರ್ಚಿಸದೇ ಡಿಆರ್ಎಸ್ ರಿವ್ಯೂ ಪಡೆದರು.